

ಅರಸೀಕೆರೆ ಗ್ರಾಮಾಂತರ: ದೇವಾಲಯ, ಮಠ, ಮಂದಿರ, ಧಾರ್ಮಿಕ ಕೇಂದ್ರಗಳು ಮಾತ್ರವಲ್ಲದೆ ದಯೆ ಧರ್ಮ ಮಾನವೀಯತೆ ಕೂಡ ಮನುಷ್ಯನಿಗೆ ದಾರಿತೋರುವ ಜಾಗೃತ ಕೇಂದ್ರವೆಂದು ಆದಿಚುಂಚನಗಿರಿ ಆದಿಹಳ್ಳಿ ಶಾಖಾಮಠದ ಶಿವಪುತ್ರನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಗಂಡಸಿ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರ ಗೊಂಡಿರುವ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವಾಲಯದ ಕಳಸ ಸ್ಥಾಪನೆ ಹಾಗೂ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡು ಆಶೀರ್ವಚನ ನೀಡಿದರು.
ಸಂಪತ್ತು ಇದ್ದಾಗ ದಾನ-ಧರ್ಮ, ಅಧಿಕಾರವಿದ್ದಾಗ ಜನರ ಸೇವೆ ಮಾಡುವ ಮನುಷ್ಯನ ಬದುಕು ನಿಜಕ್ಕೂ ಸಾರ್ಥಕವೆನಿಸಲಿದೆ. ಈ ನಿಟ್ಟಿನಲ್ಲಿ ಗಂಡಸಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಗ್ರಾಮ ದೇವತೆಗಳ ದೇವಾಲಯವನ್ನು ನವೀಕರಿಸಿ ದೇವಿಯರ ಕೃಪೆಗೆ ಪಾತ್ರರಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ದೇವಾಲಯದಲ್ಲಿ ಮೂರು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಅರ್ಚಕ ಕೃಷ್ಣಪ್ರಸಾದ್ ಶರ್ಮಾ ಮತ್ತು ಸುಬ್ಬರಾವ್ ತಂಡ ಗಣಪತಿ ಹೋಮ, ಚಂಡಿಕಾ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿತು.
ಪೂರ್ಣಾವತಿ ಸಂದರ್ಭ ಶಿವಪುತ್ರನಾಥ ಸ್ವಾಮೀಜಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದ್ಯಾವೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್, ಮುಖಂಡರಾದ ನಂಜುಂಡಪ್ಪ ಇತರರು ಇದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ಹಮಮ್ಮಿಕೊಳ್ಳಲಾಗಿತ್ತು.