

ತೀರ್ಥಹಳ್ಳಿ: ವಿಧಾನ ಪರಿಷತ್ ಕಲಾಪದ ನಂತರ ಸಭಾಂಗಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸದಸ್ಯ ಸಿ.ಟಿ.ರವಿ ನಡುವಿನ ವಾಕ್ ಸಮರ ನಾಡಿನಾದ್ಯಂತ ಸಂಚಲನ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿ ತಾವು ನೇರ ಪ್ರತ್ಯಕ್ಷದರ್ಶಿಗಳಾಗಿರಲಿಲ್ಲ ಎಂಬ ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂಬ ತೀರ್ಮಾನಕ್ಕೆ ಬರುವಂತಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಹಿರಂಗ ಪತ್ರ ಬರೆದಿದ್ದಾರೆ.
ಸಭಾಪತಿಗಳಾದ ತಾವು ಪರಿಷತ್ತಿನ ಆಡಳಿತಗಾರರೂ ಆಗಿದ್ದು, ಸಭಾಂಗಣ ಮತ್ತು ಕಾರಿಡಾರ್ ಕೂಡ ತಮ್ಮದೇ ಮಾರ್ಗದರ್ಶನ ಮತ್ತು ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತದೆ. ಪರಿಷತ್ ಕಲಾಪದ ನಂತರ ಅಂದು ಪರಿಷತ್ತಿನ ಸಭಾಂಗಣದಲ್ಲಿ ನಡೆದಿದ್ದ ಪ್ರತಿಭಟನೆ, ಘೋಷಣೆ, ಪ್ರತಿ ಘೋಷಣೆಯನ್ನು ಸದನದ ಸದಸ್ಯರು, ಮಂತ್ರಿಗಳು, ಸಿಬ್ಬಂದಿ, ಮಾರ್ಷಲ್‌ಗಳಲ್ಲದೆ ಮಾಧ್ಯಮದವರೂ ನೋಡಿದ್ದಾರೆ. ಹೀಗಾಗಿ ಈ ಘಟನೆಗೆ ಸಂಬಂಧಿಸಿ ಹಾಜರಿದ್ದವರ ಸಾಕ್ಷಿ ಪಡೆದು ಅಗತ್ಯವಿದ್ದಲ್ಲಿ ಕಾನೂನು ಸಲಹೆ ಪಡೆದು ನಿಮ್ಮ ಮಾರ್ಗದರ್ಶನದಲ್ಲಿಯೇ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದಿನ ಸಭಾಪತಿಗಳಾಗಿದ್ದವರ ಸಲಹೆ ಪಡೆದು, ಚರ್ಚಿಸಿ, ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವ ಅಧಿಕಾರವೂ ನಿಮಗಿದೆ. ನಿಮಗಿರುವ ಈ ಹಕ್ಕನ್ನು ಕಳೆದುಕೊಳ್ಳಬಾರದು. ನಿಮ್ಮ ತೀರ್ಪಿನಿಂದ ನ್ಯಾಯ ಸಿಗಲಿಲ್ಲ ಎಂಬ ಅಭಿಪ್ರಾಯ ಇರುವವರು ನ್ಯಾಯಾಲಯದ ಕದ ತಟ್ಟುವ ಅವಕಾಶವಂತೂ ಇದ್ದೇ ಇದೆ. ಆದರೆ ಸಂವಿಧಾನಬದ್ಧ ಪರಿಷತ್ತಿನ ಅಧಿಕಾರವನ್ನು ಕೈಚೆಲ್ಲಿ ಪೊಲೀಸ್ ಇಲಾಖೆ ಅಥವಾ ಇತರರಿಗೆ ಈ ಪ್ರಕರಣವನ್ನು ವಹಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಈ ಘಟನೆ ಕತ್ತಲಲ್ಲಿ ನಡೆದಿದ್ದಲ್ಲ. ರಾಜ್ಯದ ಜನತೆಗೆ ಇದನ್ನು ತಿಳಿಯುವ ಹಕ್ಕಿದೆ. ತೀರ್ಥಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶಾಂತವೇರಿ ಗೋಪಾಲಗೌಡರು ಮೈಕ್ ಕಿತ್ತೆಸೆದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರು. ಇತ್ತೀಚೆಗೆ ಪಕ್ಷಾಂತರ ವಿಷಯದಲ್ಲಿ ಸದಸ್ಯತ್ವವನ್ನು ರದ್ದುಗೊಳಿಸಿದ್ದೂ ನಮ್ಮ ಕಣ್ಣ ಮುಂದಿದೆ ಎಂದು ಪತ್ರದಲ್ಲಿ ಕಿಮ್ಮನೆ ರತ್ನಾಕರ್ ಉಲ್ಲೇಖಿಸಿದ್ದಾರೆ.