ಕರೊನಾ ಸೋಂಕಿತರಿಗೆ ಗುಂಡಿಕ್ಕಲು ಆದೇಶ ನೀಡಿದೆ ಈ ಸರ್ವಾಧಿಕಾರಿ ರಾಷ್ಟ್ರ!

Kim jong un
Published on

ವಾಷಿಂಗ್ಟನ್: ಕರೊನಾ ಸೋಂಕು ಕಾಣಿಸಿಕೊಳ್ಳದ ದೇಶವಾಗಿರುವ ಉತ್ತರ ಕೊರಿಯಾದಲ್ಲಿ ಚೀನಾದಿಂದ ಸೋಂಕು ಪ್ರಸರಣ ತಪ್ಪಿಸಲು ಗುಂಡಿಕ್ಕಿ ಕೊಲ್ಲುವಂತೆ ಆದೇಶಿಸಲಾಗಿದೆ ಎಂದು ಅಮೆರಿಕದ ಕಮಾಂಡರ್ ಒಬ್ಬರು ಹೇಳಿದ್ದಾರೆ. ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಭಾಗವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆದರೂ ನುಸುಳಿ ಬರುವವರ ಮೇಲೆ ಗುಂಡು ಹಾರಿಸುವಂತೆ ಉತ್ತರ ಕೊರಿಯಾದ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದಿದ್ದಾರೆ.

ಈ ಮಧ್ಯೆ, ಸ್ಪುಟ್ನಿಕ್-ವಿ ಔಷಧದ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನ್ನು ಬ್ರೆಜಿಲ್ ಮತ್ತು ಟರ್ಕಿಯಲ್ಲಿ ನಡೆಸಲು ಬ್ರೆಜಿಲ್ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ವಾರದಲ್ಲಿ ಟರ್ಕಿಯೊಂದಿಗೂ ಒಪ್ಪಂದ ಆಗುವ ಸಾಧ್ಯತೆಯಿದೆ. ರಷ್ಯಾದಿಂದ ಬ್ರೆಜಿಲ್‌ಗೆ 500 ಡೋಸೇಜ್ ಔಷಧವನ್ನು ರಫ್ತು ಮಾಡಲಾಗುತ್ತಿದ್ದು, ಅಲ್ಲಿ ಅದನ್ನು ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗುವುದು ಎನ್ನಲಾಗಿದೆ.

ಭಾರತದಲ್ಲಿ ಗುರುವಾರ 96,500ಕ್ಕೂ ಹೆಚ್ಚು ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇದು ಈವರೆಗಿನ ಏಕದಿನ ಏರಿಕೆಯಲ್ಲಿ ಗರಿಷ್ಠ ದಾಖಲೆಯಾಗಿದೆ. 24 ಗಂಟೆಗಳಲ್ಲಿ 1,209 ಜನರು ಮೃತರಾಗಿದ್ದಾರೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 45 ಲಕ್ಷದ ಗಡಿ ದಾಟಿದ್ದು, ಸಾವಿನ ಸಂಖ್ಯೆ 76 ಸಾವಿರಕ್ಕೂ ಹೆಚ್ಚಾಗಿದೆ. 35.42 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಣಮುಖ ಪ್ರಮಾಣವು ಶೇ. 77.76ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ಪ್ರಮಾಣವೂ ಇಳಿಕೆಯಾಗಿದ್ದು, ಶೇ. 8.2ರಷ್ಟು ವರದಿಯಾಗಿದೆ.

ವಿಶ್ವದಲ್ಲಿ ಕರೊನಾ ಸೋಂಕಿತರ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಹಾಗಿದ್ದರೂ ದೇಶದಲ್ಲಿ ಮರಣ ಪ್ರಮಾಣ ಮತ್ತು ಸೋಂಕಿನ ಪ್ರಮಾಣ ಅತ್ಯಂತ ಕಡಿಮೆಯಿದೆ. ಭಾರತದಲ್ಲಿ ಮರಣ ಪ್ರಮಾಣವು ಶೇ. 1.7ರಷ್ಟಿದೆ. ಆದರೆ ಅಮೆರಿಕದಲ್ಲಿ ಶೇ. 3, ಬ್ರಿಟನ್‌ನಲ್ಲಿ ಶೇ. 11.7, ಇಟಲಿಯಲ್ಲಿ ಶೇ. 12.6 ಮರಣ ಪ್ರಮಾಣ ವರದಿಯಾಗಿದೆ. ಮರಣ ಪ್ರಮಾಣವನ್ನು ಶೇ. 1ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಆಕ್ಸಿಜನ್ ಅವಶ್ಯಕತೆ ಇರುವ ಸೋಂಕಿತರಿಗೆ ಅದನ್ನು ಪೂರೈಕೆ ಮಾಡುವುದು ಆಯಾ ರಾಜ್ಯಗಳ ಜವಾಬ್ದಾರಿ. ಹೀಗಾಗಿ ಆಕ್ಸಿಜನ್ ಸಿಲಿಂಡರ್ ಕೊರತೆಯಾಗದಂತೆ ನಿಗಾ ವಹಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ದೇಶದಲ್ಲಿ 9.43 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಶೇ. 3.7 ಸೋಂಕಿತರು ಆಕ್ಸಿಜನ್ ಸಹಾಯ ಪಡೆದಿದ್ದಾರೆ. ಕೆಲವು ರಾಜ್ಯಗಳು ಬೇರೆ ರಾಜ್ಯಗಳಿಂದ ಆಕ್ಸಿಜನ್ ಸಿಲಿಂಡರ್ ತರಿಸಿಕೊಳ್ಳುತ್ತಿವೆ. ಪ್ರತಿ ರಾಜ್ಯದಲ್ಲಿ ಆಕ್ಸಿಜನ್ ನಿರ್ವಹಣೆ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಲಾಗಿದೆ. ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ ಕಾರಣ ನಾಲ್ವರು ಸೋಂಕಿತರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದೆ.

ಭಾರತದಲ್ಲಿ 2020ರ ಮೇ ತಿಂಗಳ ಆರಂಭದಲ್ಲಿ 64 ಲಕ್ಷ ಜನರು ಕರೊನಾ ಸೋಂಕಿಗೆ ತುತ್ತಾಗಿದ್ದರು ಎನ್ನುವುದು ವರದಿಯೊಂದರಿಂದ ತಿಳಿದುಬಂದಿದೆ. ದೇಶಾದ್ಯಂತ ಮೇ 11ರಿಂದ ಜೂನ್ 4ರವರೆಗೆ ಸಮೀಕ್ಷೆ ನಡೆಸಲಾಗಿದೆ. ಇದರ ವರದಿಯ ಪ್ರಕಾರ, ಶೇ. 0.73 ಜನರಿಗೆ ಕರೊನಾ ಸೋಂಕು ತಗುಲಿದೆ. ಅದರಲ್ಲಿ ಶೇ. 43.3 ಜನರು 18-45 ವರ್ಷದವರು, ಶೇ. 39.5 ಜನರು 46-60 ವರ್ಷದವರು ಮತ್ತು ಶೇ. 17.2 ಜನರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. 28 ಸಾವಿರ ಜನರ ಮೇಲೆ ಆಂಟಿಬಾಡಿ ಪರೀಕ್ಷೆ ಮಾಡಲಾಗಿದ್ದು, ಈ ಅಂಕಿ ಅಂಶ ಹೊರಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net