ಏನಾಗಿದೆ ಉತ್ತರ ಕೊರಿಯಾ ಸರ್ವಾಧಿಕಾರಿಗೆ? ಯುಎಸ್​ ಅಧಿಕಾರಿಗಳು ಹೇಳುವುದೇನು?

Kim
Published on

ಪ್ಯೊಂಗ್ಯಾಂಗ್: ಕರೊನಾ ವೈರಸ್​ ಹರಡುವಿಕೆಯಷ್ಟೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿರುವ ಸುದ್ದಿ ವೈರಲ್​ ಆಗಿದ್ದು, ದಿನನಿತ್ಯ ನಾನಾ ರೀತಿಯ ಸುದ್ದಿ, ಕಿಮ್​ ಜಾಂಗ್​ ಉನ್​ ಕುರಿತು ಕೇಳಿಬರುತ್ತಿವೆ. ಇದರ ನಡುವೆ ಅವರು ಮೃತಪಟ್ಟಿದ್ದಾರೆ ಎಂಬ ಅಧಿಕೃತವಲ್ಲದ ಸುದ್ದಿಯೂ ಹರಿದಾಡಿತ್ತು. ಇದೀಗ ಕಿಮ್​ ಅನಾರೋಗ್ಯಕ್ಕೀಡಾಗಿಲ್ಲ. ಕರೊನಾ ಸೋಂಕು ಹಿನ್ನೆಲೆ ಆಶ್ರಯ ಪಡೆದುಕೊಳ್ಳುತ್ತಿರಬಹುದು ಎಂದು ಕೊರಿಯಾ ಮತ್ತು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.

ಈವರೆಗೂ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ ಎಂದು ಕರೊನಾ ತವರು ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಕೊರಿಯಾ ವಾದಿಸುತ್ತಿದೆ. ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ಇನ್ನು ತಿಳಿದಿಲ್ಲ. ಹೊರ ಜಗತ್ತಿಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಸರ್ವಾಧಿಕಾರಿ ಕಿಮ್​ ನಡೆ ಅನುಮಾನ ಮೂಡಿಸುವಂತಿದೆ.

ಇದರ ನಡುವೆ ಕೊರಿಯಾದ ಪ್ರಮುಖ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲೂ ಕಿಮ್​ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂಬುದು ಸಮಂಜಸವಾಗಿದೆ ಎಂದು ದಕ್ಷಿಣ ಕೊರಿಯಾದ ಏಕೀಕರಣ ಸಚಿವ ಕಿಮ್​ ಯೆಯಾನ್ ಚುಲ್ ತಿಳಿಸಿದ್ದರು.

ಅಂದಹಾಗೆ ಕಿಮ್​ ಏಪ್ರಿಲ್​ 15ರಿಂದ ಸಾರ್ವಜನಿಕ ಜೀವನದಿಂದ ಗೈರಾಗಿದ್ದಾರೆ. ಉತ್ತರ ಕೊರಿಯಾ ಸಂಸ್ಥಾಪಕ ಹಾಗೂ ತಮ್ಮ ತಾತ ಕಿಮ್​​ ಇಲ್ ಸಂಗ್​ ಜನ್ಮ ವಾರ್ಷಿಕೋತ್ಸವಕ್ಕೂ ಕಿಮ್​ ಹಾಜರಾಗಲಿಲ್ಲ. ವಿಶೇಷವೆಂದರೆ ಅಧಿಕಾರ ವಹಿಸಿಕೊಂಡಾಗಿನಿಂದ ಒಂದು ದಿನವೂ ವಾರ್ಷಿಕೋತ್ಸವವನ್ನು ಮಿಸ್​ ಮಾಡಿಕೊಂಡವರಲ್ಲ. ಇದರ ನಡುವೆ ಕಿಮ್​ಗೆ ಹೃದಯ ಚಿಕಿತ್ಸೆ ನಡೆದಿದೆ ಎನ್ನಲಾದ ಸುದ್ದಿಯು ಸಹ ನಕಲಿ ಎನ್ನಲಾಗುತ್ತಿದೆ.

ಇನ್ನೊಂದೆಡೆ ಯುಎಸ್​ ಅಧಿಕಾರಿಗಳು ಹೇಳುವ ಹಾಗೇ ಕಿಮ್​, ತಮ್ಮ ಖಾಸಗಿ ಟ್ರೈನ್ ಮೂಲಕ ವೊನ್ಸಾನ್​ನಲ್ಲಿನ ಪೂರ್ವ ಕರಾವಳಿ ರೆಸಾರ್ಟ್​ ಟೌನ್​ನಲ್ಲಿನ ವೈರಸ್​ನಿಂದಾಗಿ ವಿರಾಮ ಪಡೆಯುತ್ತಿರಬಹುದೆಂದಿದ್ದಾರೆ. ಆದರೆ, ಕಿಮ್​ ನಿಜವಾಗಿಯೂ ಎಲ್ಲಿದ್ದಾರೆ ಎಂಬುದು ಅಧಿಕೃತವಾಗಿ ಎಲ್ಲಿಯೂ ತಿಳಿದುಬಂದಿಲ್ಲದಿರುವುದು ಅನೇಕ ಸಂಶಯಗಳನ್ನು ಮೂಡಿಸಿದೆ. (ಏಜೆನ್ಸೀಸ್​​) ​​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net