ಅಮೆರಿಕ ಎಚ್ಚರಿಕೆ ನಡುವೆಯೂ ರಷ್ಯಾಗೆ ಆಗಮಿಸಿದ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜಾಂಗ್​ ಉನ್!

Kim Jong un
Published on

ಮಾಸ್ಕೋ: ಅಮೆರಿಕದ ಎಚ್ಚರಿಕೆಯ ನಡುವೆಯೂ ಉತ್ತರ ಕೊರಿಯಾದ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್, ತನ್ನ ಶಸ್ತ್ರಾಸ್ತ್ರ ಉದ್ಯಮದ ಅಧಿಕಾರಿಗಳ ಜತೆಯಲ್ಲಿ​ ರಷ್ಯಾಗೆ ಆಗಮಿಸಿರುವುದಾಗಿ ಜಪಾನ್​ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಶಸ್ತ್ರಾಸ್ತ್ರ ಒಪ್ಪಂದ ಮಾಡಿಕೊಳ್ಳಬಾರದು ಎಂದು ಅಮೆರಿಕ ಎಚ್ಚರಿಕೆ ನೀಡಿದ್ದರೂ ಕಿಮ್​ ಜಾಂಗ್​ ಉನ್​ ರಷ್ಯಾಗೆ ಭೇಟಿ ನೀಡಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಜತೆ ಸಮಗ್ರ ಚರ್ಚೆ ನಡೆಸಲಿದ್ದಾರೆ ಎಂದು ಕ್ರೆಮ್ಲಿನ್​ (ರಷ್ಯಾ ಸರ್ಕಾರ) ಹೇಳಿದೆ.

ಕಿಮ್​ ಜಾಂಗ್​ ಉನ್,​ ಭಾನುವಾರ ಖಾಸಗಿ ರೈಲಿನಲ್ಲಿ ಪ್ಯೊಂಗ್ಯಾಂಗ್​ನಿಂದ ರಷ್ಯಾಗೆ ತೆರಳಿದರು. ಅವರ ಜತೆಯಲ್ಲಿ ಉತ್ತರ ಕೊರಿಯಾದ ಶಸ್ತ್ರಾಸ್ತ್ರ ಉದ್ಯಮ ಮತ್ತು ಸೇನಾಧಿಕಾರಿಗಳು ಹಾಗೂ ವಿದೇಶಾಂಗ ಸಚಿವರು ಕೂಡ ಇದ್ದರು. ಉತ್ತರ ಕೊರಿಯಾದಿಂದ ರಷ್ಯಾದ ಪೂರ್ವಕ್ಕೆ ಮುಖ್ಯ ರೈಲು ರಹದಾರಿಯಾದ ಖಾಸನ್ ನಿಲ್ದಾಣಕ್ಕೆ ಕಿಮ್ ಅವರನ್ನು ಹೊತ್ತ ರೈಲು ಆಗಮಿಸಿತು ಎಂದು ಹೆಸರೇಳಲು ಇಚ್ಛಿಸದ ರಷ್ಯಾದ ಅಧಿಕೃತ ಮೂಲಗಳು ತಿಳಿಸಿರುವುದಾಗಿ ಜಪಾನ್​ನ ಕ್ಯೋಡೋ ನ್ಯೂಸ್​ ಏಜೆನ್ಸಿ ಮಂಗಳವಾರ ವರದಿ ಮಾಡಿದೆ.

ಇದು ಪೂರ್ಣ ಪ್ರಮಾಣದ ಭೇಟಿಯಾಗಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಎರಡು ನಿಯೋಗಗಳ ನಡುವೆ ಮಾತುಕತೆಗಳು ನಡೆಯುತ್ತವೆ. ಇದಾದ ಬಳಿಕ ಅಗತ್ಯವಿದ್ದರೆ, ನಾಯಕರು ತಮ್ಮ ಸಂವಹನವನ್ನು ಮುಂದುವರಿಸುತ್ತಾರೆ ಎಂದಿದ್ದಾರೆ. ಆದರೆ, ಖಾಸನ್ ಆಡಳಿತದ ಅಧಿಕಾರಿಯೊಬ್ಬರು ಕಿಮ್ ಆಗಮನದ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಪುತಿನ್ ಅವರು ಇಂದು ವ್ಲಾಡಿವೋಸ್ಟಾಕ್‌ಗೆ ಆಗಮಿಸುವ ನಿರೀಕ್ಷೆ ಇದೆ. ಬುಧವಾರದವರೆಗೆ ನಡೆಯುವ ಪೂರ್ವ ಆರ್ಥಿಕ ವೇದಿಕೆಯ ಮುಖ್ಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಕಿಮ್ ಅವರೊಂದಿಗಿನ ಸಭೆಗಳು ಪ್ರತ್ಯೇಕವಾಗಿ ನಡೆಯಲಿದೆ ಎಂಬ ಮಾಹಿತಿ ಇದೆ. ಆದರೆ, ಸ್ಥಳದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಮತ್ತು ಕಿಮ್ ಈ ಈವೆಂಟ್‌ಗೆ ಹಾಜರಾಗುತ್ತಾರೆಯೇ ಎಂಬ ಪ್ರಶ್ನೆಗೂ ಉತ್ತರ ಇಲ್ಲ.

ರಷ್ಯಾ ಮತ್ತು ಕೊರಿಯಾ ಭೇಟಿ ಸನ್ನಿಹಿತವಾಗಿದೆ ಎಂದು ಅಮೆರಿಕ ಮೊದಲೇ ಹೇಳಿತ್ತು. ರಷ್ಯಾ ಮತ್ತು ಉತ್ತರ ಕೊರಿಯಾ ನಡುವೆ ಶಸ್ತ್ರಾಸ್ತ್ರ ಮಾತುಕತೆಗಳು ಸಕ್ರಿಯವಾಗಿ ಮುಂದುವರೆದಿದೆ ಮತ್ತು ಕಿಮ್ ಮತ್ತು ಪುತಿನ್, ಯೂಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಆದರೆ, 18 ತಿಂಗಳುಗಳಿಗಿಂತ ಹೆಚ್ಚು ಕಾಲ ನಡೆದ ಯುದ್ಧದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವ್ಯಯಿಸಿರುವ ರಷ್ಯಾಕ್ಕೆ ಉತ್ತರ ಕೊರಿಯಾ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ ಎಂಬ ವಿಚಾರವನ್ನು ಪ್ಯೊಂಗ್ಯಾಂಗ್ ಮತ್ತು ಮಾಸ್ಕೋ ನಿರಾಕರಿಸಿವೆ.

ಇನ್ನು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾ ಮತ್ತು ಪರಮಾಣು ಶಸ್ತ್ರಸಜ್ಜಿತ ಉತ್ತರ ಕೊರಿಯಾ ನಡುವಿನ ನಿಕಟ ಮಿಲಿಟರಿ ಸಹಕಾರದ ಇತ್ತೀಚಿನ ಸೂಚನೆಗಳು ಬಗ್ಗೆ ಕಳವಳಕಾರಿಯಾಗಿದೆ ಎಂದು ವ್ಯಕ್ತಪಡಿಸುತ್ತಿವೆ. 2019ರಲ್ಲಿ ಭೇಟಿಯಾದ ನಂತರ ಪುತಿನ್ ಅವರೊಂದಿಗೆ ಕಿಮ್ ಅವರ ಎರಡನೇ ಶೃಂಗಸಭೆ ಇದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net