

ರಾಜಧಾನಿ ಬೈರುತ್ ಸೇರಿದಂತೆ ಲೆಬನಾನ್ನ ನೂರಾರು ಸ್ಥಳಗಳಲ್ಲಿ ಮಂಗಳವಾರ ಏಕಕಾಲಕ್ಕೆ ಸಾವಿರಾರು ಪೇಜರ್ಗಳು ಸ್ಪೋಟಗೊಂಡ ಘಟನೆ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. 11 ಜನ ಮೃತಪಟ್ಟು 4 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಬಹುತೇಕರು ಹಿಜ್ಬುಲ್ಲ್ಲಾ ಉಗ್ರ ಸಂಘಟನೆಯ ಸದಸ್ಯರಿದ್ದಾರೆ. ಅವರ ಪ್ಯಾಂಟಿನ ಜೇಬಿನಿಂದ, ಶರ್ಟಿನ ಕಿಸೆಯಿಂದ, ಕೈ ಬೆರಳುಗಳಿಂದ, ಮುಖ-ಕುತ್ತಿಗೆಯಿಂದ ರಕ್ತ ಸೋರುತ್ತಿರುವ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ತರಕಾರಿ ಖರೀದಿಸುತ್ತಿದ್ದವರ ಕೈಚೀಲದಿಂದ, ದಿನಸಿ ಅಂಗಡಿಯ ಕ್ಯಾಷ್ ಕೌಂಟರ್ನಿಂದ ಹೊಗೆ ಬರುತ್ತಿದ್ದ ದೃಶ್ಯಗಳೂ ವೈರಲ್ ಆಗಿವೆ. ರಕ್ತದಲ್ಲಿ ತೊಯ್ದುಹೋದವರನ್ನು ಅಕ್ಕಪಕ್ಕದಲ್ಲಿದ್ದ ಜನರೇ ಆಂಬುಲೆನ್ಸ್ ಗಳಲ್ಲಿ ಸಾಗಿಸಿದ್ದಾರೆ. ಈ ಗಾಯಾಳುಗಳಿಂದ ಆಸ್ಪತ್ರೆಗಳು ತುಂಬಿ ಹೋಗಿವೆ. ಇದೆಲ್ಲವನ್ನೂ ನೋಡಿದ ಸಾಮಾನ್ಯ ಜನ ‘ಏನಾಯಿತು, ಏಕಾಯಿತು, ಹೇಗಾಯಿತು’ ಎಂದು ತಿಳಿಯದೆ ಗಾಬರಿಗೀಡಾಗಿದ್ದಾರೆ. ಇದರ ಹಿಂದೆ ಇಸ್ರೇಲ್ ಕೈವಾಡ ಇದೆ ಎಂಬ ಆರೋಪವನ್ನು ಹಿಜ್ಬುಲ್ಲ್ಲಾ ಉಗ್ರ ಸಂಘಟನೆ ಮಾಡಿದೆ. ಆದರೆ ಇಸ್ರೇಲ್ ಈವರೆಗೆ ಒಪ್ಪಿಯೂ ಇಲ್ಲ, ನಿರಾಕರಿಸಿಯೂ ಇಲ್ಲ. ಆದರೆ, ಸಾವಿರಾರು ಸಂಪರ್ಕ ಸಾಧನಗಳು ಹೀಗೆ ಏಕಕಾಲಕ್ಕೆ ಏಕಾಏಕಿ ಸ್ಪೋಟಗೊಂಡಿದ್ದು ಹೇಗೆ ಎಂಬ ಬಗ್ಗೆ ಇಡೀ ಜಗತ್ತು ತಲೆಕೆಡಿಸಿಕೊಂಡಿರುವುದಂತೂ ನಿಜ.
ಹಿಜ್ಬುಲ್ಗೆ ತೈವಾನ್ನಿಂದ ಬಂದಿದ್ದ ಪೇಜರ್ಗಳು: ತೈವಾನ್ನ ಗೋಲ್ಡ್ ಅಪೋಲೋ ಕಂಪನಿಯಿಂದ 5 ಸಾವಿರ ಪೇಜರ್ಗಳನ್ನು ಹಿಜ್ಬುಲ್ಲಾ 5 ತಿಂಗಳ ಖರೀದಿಸಿತ್ತು. ಅವು ಲೆಬನಾನ್ ತಲುಪುವುದರೊಳಗೆ ಇಸ್ರೇಲ್ನ ಮೊಸ್ಸಾದ್ ಗುಪ್ತಚರ ಸಂಸ್ಥೆ ತನ್ನ ಕೈಚಳಕ ತೋರಿಸಿ ಅವುಗಳಲ್ಲಿ ಸ್ಪೋಟಕವನ್ನು ತುಂಬಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಸ್ಪೋಟಗೊಂಡ ಪೇಜರ್ಗಳ ಮೇಲೆ ರಗಡ್ ಎಆರ್-924 ಎಂಬ ಲೇಬಲ್ ಇದೆ. ಈ ಹೆಸರು ಬಳಸಲು ಯೂರೋಪಿನ ಕಂಪನಿಯೊಂದರ ಜತೆ ಒಪ್ಪಂದವಾಗಿದ್ದು ನಿಜ. ಆದರೆ ಸ್ಪೋಟಕ ತುಂಬಿದ ಅಥವಾ ತುಂಬಬಹುದಾದ ಪೇಜರ್ಗಳನ್ನು ತಾನು ತಯಾರಿಸಿಲ್ಲ ಎಂದು ಗೋಲ್ಡ್ ಅಪೋಲೋ ಕಂಪನಿ ಸ್ಪಷ್ಟಪಡಿಸಿದೆ. ಆದರೂ ಬುಧವಾರ ಈ ಕಂಪನಿಯ ಕಚೇರಿ, ಉತ್ಪಾದನಾ ಘಟಕಗಳ ಮೇಲೆ ಪೊಲೀಸ್ ದಾಳಿ, ಪರಿಶೀಲನೆ, ಸಿಬ್ಬಂದಿಯ ವಿಚಾರಣೆ ನಡೆದಿದೆ.
ಪೇಜರ್ಗಳು ಸ್ಪೋಟವಾಗಿದ್ದು ಹೇಗೆ?: ಪೇಜರ್ಗಳನ್ನು ದೂರದಿಂದ ಹ್ಯಾಕ್ ಮಾಡಿ ಅವುಗಳ ಬ್ಯಾಟರಿಗಳು ಓವರ್ಹೀಟ್ ಆಗುವಂತೆ ಮಾಡಿ ಸ್ಪೋಟಗೊಳಿಸಿರಬಹುದು ಎಂಬುದು ಕೆಲವರ ವಾದ. ಇಂಥ ಕ್ರಿಯೆ ಇದುವರೆಗೆ ಕಂಡುಕೇಳರಿಯದಂಥದ್ದು. ಇನ್ನು ಕೆಲವರು ಹೇಳುವ ಪ್ರಕಾರ, ಬ್ಯಾಟರಿ ಓವರ್ಹೀಟ್ ಆಗುವುದು ಬಳಕೆದಾರನ ಗಮನಕ್ಕೆ ಬರುತ್ತದೆ. ಇಲ್ಲಿ ಹಾಗಾಗಿಲ್ಲ, ಏಕಾಏಕಿ ಸ್ಫೋಟ ಸಂಭವಿಸಿದೆ. ಈ ಪೇಜರ್ಗಳ ಉತ್ಪಾದನೆ ಸಮಯದಲ್ಲೇ ಅಥವಾ ಸಾಗಾಣಿಕೆಯ ಸಂದರ್ಭದಲ್ಲೇ ಒಳಗೆ ತಲಾ 3 ಗ್ರಾಂ ತೂಕದ ಸ್ಪೋಟಕ ಹುದುಗಿಸಿ ಇಟ್ಟಿರುವ ಸಾಧ್ಯತೆ ಇದೆ. ಸೈಬರ್ ಸೆಕ್ಯುರಿಟಿ ಜಗತ್ತಿನಲ್ಲಿ ಇಂತಹ ಸಪ್ಲೈಚೈನ್ ದಾಳಿಗಳ ಬಗ್ಗೆ ಈಗಾಗಲೇ ಸಾಕಷ್ಟು ಆತಂಕ ಇದೆ. ಇತ್ತೀಚೆಗೆ ಉತ್ಪನ್ನಗಳ ತಯಾರಿಕೆ ಸಮಯದಲ್ಲೇ ಹ್ಯಾಕರ್ಗಳು ಅವುಗಳಿಗೆ ರಿಮೋಟ್ ಆಕ್ಸೆಸ್ ಪಡೆದ ಹೈಪ್ರೊಫೈಲ್ ಕೇಸ್ಗಳು ಅಲ್ಲೊಂದು ಇಲ್ಲೊಂದು ಸಂಭವಿಸಿವೆ. ಆದರೆ ಅವೆಲ್ಲವೂ ಸಾಫ್ಟ್ವೇರ್ಗೆ ಸಂಬಂಧಿಸಿದವುಗಳಾಗಿದ್ದು, ಹಾರ್ಡ್ವೇರ್ಗಳನ್ನೂ ಹ್ಯಾಕ್ ಮಾಡಬಹುದೆಂಬುದಕ್ಕೆ ಇದೇ ಮೊದಲ ಬಾರಿಗೆ ಜಗತ್ತು ಸಾಕ್ಷಿಯಾಗಿದೆ ಎನ್ನುತ್ತಾರೆ ಕೆಲವು ತಜ್ಞರು.
ಸತ್ತವರು ಯಾರ್ಯಾರು?: ಪೇಜರ್ ಸ್ಪೋಟಕ್ಕೆ ಬಲಿಯಾದವರಲ್ಲಿ ಹಿಜ್ಬುಲ್ಲ್ಲಾ ಸಂಸದರಿಬ್ಬರ ಮಕ್ಕಳೂ ಇದ್ದಾರೆ. ಹಿಜ್ಬುಲ್ಲ್ಲಾ ಸದಸ್ಯನೊಬ್ಬನ ಮಗಳೂ ಪ್ರಾಣ ಕಳೆದುಕೊಂಡಿದ್ದಾಳೆ. ಗಾಯಗೊಂಡವರಲ್ಲಿ ಲೆಬನಾನ್ಗೆ ಇರಾನ್ ರಾಯಭಾರಿಯಾಗಿರುವ ಮೊಜ್ತಬಾ ಅಮಾನಿ ಕೂಡ ಇದ್ದಾರೆ. ಹಿಜ್ಬುಲ್ಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾಗೆ ಏನೂ ಆಗಿಲ್ಲ. ಬಹುತೇಕ ಗಾಯಾಳುಗಳ ಕೈ, ಕಣ್ಣು ಮತ್ತು ಮುಖ ವಿರೂಪಗೊಂಡಿವೆ. ಹಲವರ ಸೊಂಟದ ಭಾಗ ಛಿದ್ರವಾಗಿದೆ. ಆಸ್ಪತ್ರೆ ಸೇರಿದವರಲ್ಲಿ ಬಹುತೇಕರು ಸಾಮಾನ್ಯ ನಾಗರಿಕರ ದಿರಿಸಿನಲ್ಲಿದ್ದಾರೆ. ಇವರೆಲ್ಲರೂ ಹಿಜ್ಬುಲ್ಲ್ಲಾ ಉಗ್ರಸಂಘಟನೆಗೆ ಸೇರಿದವರೇ ಅಲ್ಲವೇ ಎಂಬುದನ್ನು ಖಚಿತವಾಗಿ ಹೇಳಲಾಗುತ್ತಿಲ್ಲ. ವೃದ್ಧರು, ಮಕ್ಕಳು, ಆರೋಗ್ಯ ಕಾರ್ಯಕರ್ತರು ಕೂಡ ಗಾಯಗೊಂಡವರಲ್ಲಿ ಇದ್ದಾರೆ.
ಈ ಕಾಲದಲ್ಲೂ ಪೇಜರ್ ಬಳಕೆ ಏಕೆ?: ಪೇಜರ್ಗಳು 1990ರ ದಶಕದ ಮಧ್ಯಭಾಗದಲ್ಲಿ ಬಳಕೆಯಾಗುತ್ತಿದ್ದ ವೈರ್ಲೆಸ್ ಸಂಪರ್ಕ ಸಾಧನಗಳು. ಆಗಿನ್ನೂ ಮೊಬೈಲ್ ಫೋನ್ಗಳು ಬಂದಿರಲಿಲ್ಲ. ಈಗ ಮೊಬೈಲ್ಗಳಿದ್ದರೂ ಹಿಜ್ಬುಲ್ಲಾ ಸದಸ್ಯರು ಪೇಜರ್ಗಳನ್ನೇಕೆ ಬಳಸುತ್ತಿದ್ದರು ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಕಾರಣ - ಮೊಬೈಲ್ನಲ್ಲಿರುವ ಲೊಕೇಶನ್ ಟ್ರ್ಯಾಕಿಂಗ್ ಸೌಲಭ್ಯ ಬಳಸಿ ಇಸ್ರೇಲಿಗರು ಹಿಜ್ಬುಲ್ಲಾ ಉಗ್ರರ ಜಾಡು ಪತ್ತೆ ಹಚ್ಚುತ್ತಾರೆ ಎಂಬ ಭಯ. ಸ್ವತಃ ಹಿಜ್ಬುಲ್ಲಾ ಮುಖ್ಯಸ್ಥನೇ ಮೊಬೈಲ್ ಬಗ್ಗೆ ಭಯ ಬಿತ್ತಿ, ಪೇಜರ್ ಬಳಸುವಂತೆ ಹುರಿದುಂಬಿಸಿದ್ದ.
ಯಾರು ಹೊಣೆ?: ಈವರೆಗೆ ಯಾರೂ ಈ ಸರಣಿ ಸ್ಪೋಟದ ಹೊಣೆ ಹೊತ್ತುಕೊಂಡಿಲ್ಲ. ಆದರೆ ಲೆಬನಾನ್ ಪ್ರಧಾನಿ ಮತ್ತು ಹಿಜ್ಬುಲ್ಲ್ಲಾ ಉಗ್ರಸಂಘಟನೆ ಮಾತ್ರ ಇಸ್ರೇಲನ್ನೇ ಹೊಣೆ ಮಾಡಿವೆ. ಅದರಲ್ಲೂ ಇಸ್ರೇಲಿನ ಗುಪ್ತಚರ ಸಂಸ್ಥೆಯಾದ ಮೊಸ್ಸಾದ್ನ ಕೈವಾಡ ಇರುವ ಬಗ್ಗೆ ಅಮೆರಿಕದ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹಿಜ್ಬುಲ್ಲ್ಲಾ ಸಂಘಟನೆ ಸಿದ್ಧತೆ ಮಾಡಿಕೊಳ್ಳುತ್ತಿದೆ.