

ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ಸೈಟ್ ಸೃಷ್ಟಿಸಿ ಕಿಡ್ನಿ ದಾನ ಹಾಗೂ ಮಾರಾಟ ಮಾಡುವವರಿಗೆ 4 ಕೋಟಿ ರೂ. ನೀಡುವುದಾಗಿ ನಂಬಿಸಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ನೈಜೀರಿಯಾ ಮೂಲದ ಮೂವರು ಆಗ್ನೇಯ ವಿಭಾಗ ಸಿಇಎನ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೆಗಡೆನಗರದ ಎಚ್ಬಿಆರ್ ಬಡಾವಣೆಯ ಮಿರಾಕಲ್ ಅಲಿಯಾಸ್ ಮಿಮಿ (28), ಸೋವಾಹ್ ಕಾಲಿನ್ಸ್ ನಿ (32), ಮ್ಯಾಥ್ಯೂ ಇನೋಸೆಂಟ್ ಅಲಿಯಾಸ್ ಪಾಲ್ (38) ಬಂಧಿತರು. ಆರೋಪಿ ಗಳಿಂದ ಮೊಬೈಲ್, ಲ್ಯಾಪ್ಟಾಪ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಸಾಗರ್, ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿ 10ಕ್ಕೂ ಅಧಿಕ ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ಸೈಟ್ ತೆರೆದಿದ್ದರು. ನಮ್ಮ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲು ಕಿಡ್ನಿ ದಾನಿಗಳ ಅವಶ್ಯಕತೆಯಿದ್ದು, ಕಿಡ್ನಿದಾನ, ಮಾರಾಟ ಮಾಡುವವರಿಗೆ ಮುಂಗಡವಾಗಿ 2 ಕೋಟಿ ರೂ. ಹಾಗೂ ಕಿಡ್ನಿ ಕಸಿ ಪ್ರಕ್ರಿಯೆ ಮುಗಿದ ಬಳಿಕ ಮತ್ತೆ 2 ಕೋಟಿ ರೂ. ನೀಡುತ್ತೇವೆ ಎಂದು ಜಾಹೀರಾತು ಹಾಕಿ ಮೊಬೈಲ್ ನಂಬರ್ ಉಲ್ಲೇಖಿಸುತ್ತಿದ್ದರು. ಇದನ್ನು ಗಮನಿಸಿ 4 ಕೋಟಿ ರೂ. ಆಸೆಗಾಗಿ ಕಿಡ್ನಿ ದಾನ ಹಾಗೂ ಮಾರಾಟ ಮಾಡಲು ಹಲವರು ಆರೋಪಿಗಳನ್ನು ಸಂರ್ಪಸಿದ್ದರು.
ಅವರಿಂದ ಮುಂಗಡವಾಗಿ ನೋಂದಣಿ ಶುಲ್ಕ, ಮೆಡಿಕಲ್ ಶುಲ್ಕ, ವೈದ್ಯರ ಶುಲ್ಕ ಸೇರಿ 5 ಸಾವಿರ ರೂ.ನಿಂದ ಲಕ್ಷಾಂತರ ರೂ.ವರೆಗೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಹಣ ಕೈ ಸೇರುತ್ತಿದ್ದಂತೆ ಮೊಬೈಲ್ನಿಂದ ಸಿಮ್ ತೆಗೆದು ಮತ್ತೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಅನಧಿಕೃತ ವಾಸ: ಆರೋಪಿಗಳು ವಿದ್ಯಾರ್ಥಿ ವೀಸಾ ಮೂಲಕ ಭಾರತಕ್ಕೆ ಬಂದಿದ್ದು, ಪಾಸಪೋರ್ಟ್ನ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ವಂಚನೆಯಿಂದ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು.
ದೂರು ನೀಡಿ: ಈ ಜಾಲದ ಮೋಸಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಜಯನಗರದಲ್ಲಿರುವ ಸಾಗರ್ ಆಸ್ಪತ್ರೆಯ ನಕಲಿ ವೆಬ್ಸೈಟ್ ಸೃಷ್ಟಿಸಿ ಇದೇ ಮಾದರಿಯಲ್ಲಿ ವಂಚಿಸಲು ಯತ್ನಿಸಿದ್ದರು. ಸಾರ್ವಜನಿಕರೊಬ್ಬರು ಆಸ್ಪತ್ರೆಗೆ ಭೇಟಿ ನೀಡಿ ಕಿಡ್ನಿ ದಾನ ಮಾಡಿದರೆ 4 ಕೋಟಿ ರೂ. ಕೊಡುವುದಾಗಿ ಜಾಹೀರಾತು ಹಾಕಿರುವ ಕುರಿತು ವಿಚಾರಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸಿದಾಗ ವಂಚನೆ ಜಾಲದ ಸುಳಿವು ಸಿಕ್ಕಿತ್ತು. ಆಸ್ಪತ್ರೆ ನಿರ್ದೇಶಕ ಡಾ. ಮಹೇಂದ್ರ ಕುಮಾರ್ ಆಗ್ನೇಯ ವಿಭಾಗದ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿದ್ದರು. ಆರೋಪಿಗಳು ಸೃಷ್ಟಿಸಿದ್ದ ನಕಲಿ ವೆಬ್ಸೈಟ್ನಲ್ಲಿ ಉಲ್ಲೇಖಿಸಿರುವ ಮೊಬೈಲ್ ನಂಬರ್, ಸಿಡಿಆರ್ ಕರೆಗಳನ್ನು ಪೊಲೀಸರು ವಿಶ್ಲೇಷಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು.