ಕಿಡ್ನಿ ದಾನಿಗಳು ಬೇಕಾಗಿದ್ದಾರೆ!

4-67d1c889dcee1
Published on

| ಪಂಕಜ ಕೆ.ಎಂ. ಬೆಂಗಳೂರು

ಬದಲಾದ ಜೀವನಶೈಲಿ, ಆಹಾರಕ್ರಮ ಹಾಗೂ ಅತಿಯಾದ ಜಂಕ್​ಫುಡ್ ಸೇವನೆಯಿಂದಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ‘ಕಿಡ್ನಿ ಸಮಸ್ಯೆ’ಗೆ ಒಳಗಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಲ್ಲಿ ಕಿಡ್ನಿ ಕಸಿಗಾಗಿ ಕಾಯುವವರ ಸಂಖ್ಯೆ 4,892 ಇದೆ. ದಾನಿಗಳಿಗೆ ಬೇಡಿಕೆ ಹೆಚ್ಚಿದೆ.

ಇದಲ್ಲದೆ ಮೂತ್ರವಿಸರ್ಜನೆ ಸಮಸ್ಯೆ, ಉರಿಮೂತ್ರ, ಕಿಡ್ನಿಯಲ್ಲಿ ಕಲ್ಲು, ಕಿಡ್ನಿ ಕ್ಯಾನ್ಸರ್, ಕಿಡ್ನಿಯಲ್ಲಿ ನೀರುಗುಳ್ಳೆ ಸೇರಿ ಹಲವು ಬಗೆಯ ಸಮಸ್ಯೆಗಳೂ ಹೆಚ್ಚಿದ್ದು, ಹಿಂದೆಲ್ಲ 60 -70 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುತ್ತಿದ್ದ ಈ ಸಮಸ್ಯೆಗಳು, ಈಗ ಮಕ್ಕಳೂ ಸೇರಿ ಕಡಿಮೆ ವಯಸ್ಸಿನವರಲ್ಲಿಯೇ ಹೆಚ್ಚಾಗಿವೆ. ಆದರೆ ಕಾರಣಗಳು ಬೇರೆ ಬೇರೆ. ಆರಂಭದಲ್ಲೇ ಸಮಸ್ಯೆ ಗುರುತಿಸಿ ಚಿಕಿತ್ಸೆ ಪಡೆಯದಿದ್ದರೆ ಕಿಡ್ನಿ ವೈಫಲ್ಯಕ್ಕೆ ಒಳಗಾಗಬೇಕಾಗುತ್ತದೆ.

ಆಗ ಡಯಾಲಿಸಿಸ್, ಕಿಡ್ನಿ ಕಸಿ ಅನಿವಾರ್ಯವಾಗುತ್ತದೆ. ಹಾಗಾಗಿ ‘ನಿಮ್ಮ ಮೂತ್ರಪಿಂಡಗಳು ಸರಿಯಾಗಿವೆಯೇ? ಮೊದಲೇ ಪತ್ತೆ ಮಾಡಿ, ಮೂತ್ರಪಿಂಡದ ಆರೋಗ್ಯವನ್ನು ರಕ್ಷಿಸಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ಕಿಡ್ನಿ ದಿನ ಆಚರಿಸಲಾಗುತ್ತಿದೆ. ಮೂತ್ರಪಿಂಡ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಮುನ್ನೆಚ್ಚರಿಕೆಗೆ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಔಷಧ ನೀಡುವಾಗ ವೈದ್ಯರು ಸಹ ಎಚ್ಚರಿಕೆ ವಹಿಸಬೇಕಿದೆ. ಅಂದರೆ ಕಿಡ್ನಿ ಆರೋಗ್ಯಕ್ಕೆ ಸಮಸ್ಯೆಯಾಗದ ಪ್ರಮಾಣದಲ್ಲಿ ಔಷಧ ನೀಡಬೇಕಾಗುತ್ತದೆ. ಅದೇ ರೀತಿಯಲ್ಲಿ ರೋಗಿಗಳು ಸಹ ವೈದ್ಯರ ಸಲಹೆ ಪಡೆಯದೆ ನೋವು ನಿವಾರಕ ಸೇರಿ ಯಾವುದೇ ಔಷಧ-ಮಾತ್ರೆಗಳನ್ನು ಸೇವಿಸದಂತೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ರೋಗ ಲಕ್ಷಣಗಳು

ಅತಿಯಾದ ಆಯಾಸ, ಕಾಲುಗಳಲ್ಲಿ ಊತ, ನಡೆಯಲು ಆಗದಿರುವುದು, ವಾಕರಿಕೆ, ಮೂತ್ರವಿಸರ್ಜನೆಯಲ್ಲಿ ಏರುಪೇರು, ಉರಿಮೂತ್ರ, ಜ್ವರ ಬಂದಾಗ ಸೊಂಟದಲ್ಲಿ ನೋವು ಕಾಣಿಸಿಕೊಳ್ಳುವುದು, ಕಣ್ಣಿನ ಸುತ್ತ ಊತ, ಮೂತ್ರದಲ್ಲಿ ಗಾಢಬಣ್ಣ, ನೊರೆ ಮತ್ತು ರಕ್ತಸ್ರಾವ, ಸಮಸ್ಯೆ ಹೆಚ್ಚಾದರೆ ಉಸಿರಾಟದ ತೊಂದರೆ, ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ತೂಕ ಕಡಿಮೆ ಆಗುವುದು, ಮೈ ಕೈಯಲ್ಲಿ ತುರಿಕೆ ಇದು ಕಿಡ್ನಿ ಸಮಸ್ಯೆಯ ಪ್ರಮುಖ ಲಕ್ಷಣಗಳು.

ಎಚ್ಚರಿಕೆ ಕ್ರಮಗಳು

ಮೂತ್ರದಲ್ಲಿ ಪ್ರೋಟಿನ್ ಮತ್ತು ಅಲ್ಬುಮಿನ್ ಅಂಶ ಎಷ್ಟು ಪ್ರಮಾಣದಲ್ಲಿ ಹೊರ ಹೋಗುತ್ತದೆ ಎಂಬುದನ್ನು ಪರೀಕ್ಷೆ ಮಾಡಿಸಬೇಕು. ಜೊತೆಗೆ ಮಧುಮೇಹ, ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿಯಮಿತ ವ್ಯಾಯಾಮ, ಸಮಯಕ್ಕೆ ಸರಿಯಾಗಿ ತಾಜಾ ಆಹಾರ ಸೇವನೆ ಮತ್ತು ನಿದ್ರೆ ಮಾಡುವುದು, ಊಟದಲ್ಲಿ ಮೇಲುಪ್ಪು ಬಳಸಬಾರದು, ಹೆಚ್ಚು ನೀರು ಕುಡಿಯಬೇಕು, ಗರ್ಭಿಣಿಯರು ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಇತಿಹಾಸ

‘ನಮ್ಮ ಮೂತ್ರಪಿಂಡಗಳು ಸರಿಯಾಗಿವೆಯೇ’? ಎಂಬ ಘೋಷವಾಕ್ಯದೊಂದಿಗೆ 2006ರಲ್ಲಿ ಇಂಟರ್​ನ್ಯಾಷನಲ್ ಸೊಸೈಟಿ ಆಫ್ ನೆಫ್ರೋಲಾಜಿ (ಐಎಸ್​ಎನ್) ಮತ್ತು ಇಂಟರ್​ನ್ಯಾಷನಲ್ ಫೆಡರೇಷನ್ ಆಫ್ ಕಿಡ್ನಿ ಫೌಂಡೇಷನ್ ಸಹಯೋಗದಲ್ಲಿ ಮೊದಲ ಬಾರಿಗೆ ವಿಶ್ವ ಮೂತ್ರಪಿಂಡ ದಿನ ಆಚರಿಸಲಾಯಿತು. ಕಿಡ್ನಿ ಆರೋಗ್ಯ ಹಾಗೂ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದೊಂದಿಗೆ 66 ದೇಶಗಳಲ್ಲಿ ಒಟ್ಟಿಗೆ ಈ ದಿನ ಆಚರಿಸಲಾಯಿತು. ಇದೀಗ 80ಕ್ಕೂ ಅಧಿಕ ದೇಶಗಳಲ್ಲಿ ವಿಶ್ವ ಮೂತ್ರಪಿಂಡ ದಿನ ಆಚರಣೆ ಮೂಲಕ ಕಿಡ್ನ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಮೂತ್ರಪಿಂಡಗಳ ಕಾರ್ಯನಿರ್ವಹಣೆ ಹೇಗೆ?

ಪ್ರತಿ ಮನುಷ್ಯನಿಗೂ ಎರಡು ಮೂತ್ರಪಿಂಡಗಳು ಇದ್ದು, ಆರೋಗ್ಯಕರವಾದ ಒಂದು ಮೂತ್ರಪಿಂಡವಿದ್ದರೂ ಉತ್ತಮ ಜೀವನ ನಡೆಸಬಹುದು. ಈ ಮೂತ್ರಪಿಂಡಗಳು ದೇಹದಲ್ಲಿನ ಅನಗತ್ಯ ಹಾಗೂ ಹೆಚ್ಚುವರಿ ತ್ಯಾಜ್ಯ ಹೊರಹಾಕಿ ಸ್ವಚ್ಛಗೊಳಿಸುತ್ತವೆ. ವಿಟಮಿನ್ ಡಿ ಉತ್ಪಾದಿಸಿ ಮೂಳೆಗೆ ಶಕ್ತಿ ತುಂಬುತ್ತವೆ, ಕೆಂಪು ರಕ್ತಕಣಗಳನ್ನು ಅಭಿವೃದ್ಧಿಪಡಿಸಿ ದೇಹದಲ್ಲಿ ರಕ್ತದ ಮಟ್ಟವನ್ನು ಹೆಚ್ಚಿಸುತ್ತವೆ. ರೆಮಿನ್ ಎಂಬ ಅಂಶವು ರಕ್ತದ ಒತ್ತಡವನ್ನು ಹಾಗೂ ನೀರು, ಲವಣ ಮತ್ತು ಆಮ್ಲ ಅಂಶವನ್ನು ನಿಯಂತ್ರಿಸುತ್ತದೆ.

ಗಂಭೀರ ಹಂತ ತಲುಪುವವರೆಗೂ ಜನರು ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಅದು ಮೂತ್ರಪಿಂಡ ಸಮಸ್ಯೆಗೂ ಹೊರತಾಗಿಲ್ಲ. ಹಾಗಾಗಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಜನರಲ್ಲಿ ಅರಿವಿನ ಅಗತ್ಯವಿದೆ. ನಿಯಮಿತ ಕಿಡ್ನಿ ಆರೋಗ್ಯ ತಪಾಸಣೆ ಹಾಗೂ ರೋಗ ಲಕ್ಷಣಗಳ ಕುರಿತು ಜಾಗೃತಿ ಮೂಡಿಸಬೇಕಿದೆ. | ಡಾ. ಶಿವಲಿಂಗಯ್ಯ ನೆಫ್ರೋ ಯುರಾಲಜಿ ಸಂಸ್ಥೆಯ ನಿರ್ದೇಶಕರು ಮತ್ತು ಪ್ರಾಧ್ಯಾಪಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net