

ಬೆಂಗಳೂರು : ಡ್ರಾಪ್ ನೆಪದಲ್ಲಿ ಜೀಪ್‌ಗೆ ಏರಿ ಜ್ಯೋತಿಷಿ ಪುತ್ರನನ್ನು ಕಿಡ್ನ್ಯಾಪ್ ಮಾಡಿದ್ದ ಮೆಕಾನಿಕ್‌ನನ್ನು ಕೆಲವೇ ತಾಸಿನಲ್ಲಿ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿ ಯುವಕನನ್ನು ರಕ್ಷಣೆ ಮಾಡಿದ್ದಾರೆ.
ತುಮಕೂರು ಮೂಲದ ಅರ್ಜುನ್ (19)ಬಂಧಿತ. ಆ.4ರಂದು ಎಚ್‌ಎಸ್‌ಆರ್ ಲೇಔಟ್ 6ನೇ ಹಂತದಲ್ಲಿ ಜ್ಯೋತಿಷಿ ಪುತ್ರ ಜಯಸೂರ್ಯ(18) ಎಂಬಾತನನ್ನು ಅಪಹರಣ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು ಮೂಲದ ಅರ್ಜುನ್, ಪಿಯುಸಿ ಓದಿ ನೌಕರಿ ಅರಸಿ ನಗರಕ್ಕೆ ಬಂದು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪೇಯಿಂಗ್ ಗೆಸ್ಟ್‌ನಲ್ಲಿ ನೆಲೆಸಿದ್ದ. ಇತ್ತೀಚೆಗೆ ಕ್ರೈಂ ಧಾರವಾಹಿ ಮತ್ತು ಸಿನಿಮಾಗಳನ್ನು ನೋಡಿ ಸುಲಭವಾಗಿ ಹಣ ಸಂಪಾದನೆ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದ.
ಎಚ್‌ಎಸ್‌ಆರ್ ಲೇಔಟ್ 6ನೇ ಹಂತದಲ್ಲಿ ಮಣಿವಾಸಕನ್ ದಂಪತಿಯ ಪುತ್ರ ಜಯಸೂರ್ಯ, ಪಿಯುಸಿ ಮುಗಿಸಿ ಮನೆ ಸಮೀಪದಲ್ಲಿನ ಖಾಸಗಿ ಕೋಚಿಂಗ್ ಸೆಂಟರ್‌ಗೆ ನೀಟ್ ಪರೀಕ್ಷೆ ತರಬೇತಿಗೆ ಹೋಗುತ್ತಿದ್ದ. ಪ್ರತಿದಿನ ಜಯಸೂರ್ಯ, ತಂದೆಯ ಬೊಲೆರೋ ಜೀಪ್‌ನಲ್ಲಿ ಕೋಚಿಂಗ್ ಹೋಗಿ ಬರುತ್ತಿದ್ದ.
ಇದನ್ನು ನಿಗಾ ವಹಿಸುತ್ತಿದ್ದ ಅರ್ಜುನ್, ಅಪಹರಣ ಮಾಡುವ ಪ್ಲ್ಯಾನ್ ಮಾಡಿ ಒಂದು ತಿಂಗಳಿನಿಂದ ಮಾಹಿತಿ ಕಲೆ ಹಾಕಿದ್ದ. ಆ.4ರಂದು ಕೋಚಿಂಗ್ ಸೆಂಟರ್‌ನಿಂದ ಸಂಜೆ 5.30ಕ್ಕೆ ಜಯಸೂರ್ಯ ಹೊರಗೆ ಬಂದಾಗ ಕಾದು ಡ್ರಾಪ್ ಕೊಡುವಂತೆ ಅರ್ಜುನ್ ಕೇಳಿದ್ದಾನೆ. ಅದಕ್ಕೆ ಜಯಸೂರ್ಯ ಒಪ್ಪಿಕೊಂಡಾಗ ಅರ್ಜುನ್ ಜೀಪ್ ಏರಿದ್ದಾನೆ. ಸ್ವಲ್ಪ ದೂರು ಹೋಗುತ್ತಿದಂತೆ ಆಟಿಕೆ ಗನ್‌ನ್ನು ಜಯಸೂರ್ಯನಿಗೆ ತೋರಿಸಿ ಬೆದರಿಕೆ ಒಡ್ಡಿ ಅಲ್ಲಿಂದ ತಿಲಕನಗರಕ್ಕೆ ಕರೆದುಕೊಂಡು ಬಂದಿದ್ದಾನೆ.
ಅಲ್ಲಿಂದ ಜಯಸೂರ್ಯನ ಮೊಬೈಲ್‌ನಿಂದ ಆತನ ತಾಯಿಗೆ ವಾಟ್ಸ್‌ಆ್ಯಪ್ ಕಾಲ್ ಮಾಡಿಸಿ ಅಪಹರಣ ಮಾಡಿರುವುದಾಗಿ ಬೆದರಿಸಿ 5 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದ. ಹೆದರಿದ ಜಯಸೂರ್ಯನ ತಾಯಿ, ಅಷ್ಟೊಂದು ಹಣ ಇಲ್ಲ. ಬೇಕಾದರೇ ಮಾಂಗಲ್ಯ ಸರವನ್ನೇ ಕೊಡುತ್ತೆನೆ ಎಂದು ಗೋಗರೆದಿದ್ದಾಳೆ. ಮಗನ ಅಪಹರಣ ವಿಷಯ ತಿಳಿದ ಜ್ಯೋತಿಷಿ, ಎಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕಾರ್ಯಾಚರಣೆಗೆ ಇಳಿದ ಖಾಕಿ ಪಡೆ ಆರೋಪಿ ಮಾಡುತ್ತಿದ್ದ ವಾಟ್ಸ್‌ಆ್ಯಪ್ ಕಾಲ್ ಜಾಡು ಹಿಡಿದು ಕೆಲವೇ ತಾಸಿನಲ್ಲಿ ಬಂಧಿಸಿ ಜಯಸೂರ್ಯನನ್ನು ರಕ್ಷಣೆ ಮಾಡಿ ಪಾಲಕರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.