

ಬೆಂಗಳೂರು: ಕಳ್ಳತನ ಮಾಡಿದ್ದ ವಸ್ತುಗಳನ್ನು ವಿಲೇವಾರಿ ಮಾಡುತ್ತಿದ್ದ ೪೦ ವರ್ಷದ ಮಹಿಳೆ ಹಾಗೂ ಆಕೆಯ ಪುತ್ರನನ್ನು ಅಹರಿಸಿ, ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಇಬ್ಬರು ರೌಡಿ ಶೀಟರ್‌ಗಳು ಸೇರಿ 9 ಮಂದಿ ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಂದ್ರಾಲೇಔಟ್ ಠಾಣೆ ರೌಡಿ ಶೀಟರ್‌ಗಳಾದ ಜೋಸೆಫ್, ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನಾ, ಸೌಮ್ಯ, ಪ್ರತಾಪ್, ಜತಿನ್, ವಿಘ್ನೇಶ್, ಆಟೋ ಚಾಲಕ ಸೈಯದ್ ಶಹಬುದ್ದೀನ್, ಸ್ವಾತಿ ಹಾಗೂ ಮಾದೇಶ್ ಬಂಧಿತರು.
ಆರೋಪಿಗಳು ಆ.೧೩ರಂದು ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಿಂದ ೪೦ ವರ್ಷದ ಮಹಿಳೆ ಹಾಗೂ ಆತನ ಪುತ್ರ ವರುಣ್(೨೦) ಎಂಬುವವರನ್ನು ಅಪಹರಿಸಿ ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿ ಇರಿಸಿಕೊಂಡು ದೈಹಿಕವಾಗಿ ದೌರ್ಜನ್ಯ ನಡೆಸಿದ್ದರು. ೨ ಲಕ್ಷ ರೂ. ಹಣಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ ಇವರ ಬಳಿ ಹಣ ಇಲ್ಲ ಎಂಬುದು ಗೊತ್ತಾಗಿ ಬಿಟ್ಟು ಕಳುಹಿಸಿದ್ದರು. ಬಳಿಕ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ಲಕ್ಷ ರೂ. ಸುಲಿಗೆ ಮಾಡಲು ಅಪಹರಣ:
ದೂರುದಾರ ಮಹಿಳೆ ಮತ್ತು ಆಕೆಯ ಪುತ್ರ ವರುಣ್, ಕದ್ದ ಮೊಬೈಲ್‌ಗಳು ಹಾಗೂ ಚಿನ್ನಾಭರಣಗಳನ್ನು ವಿಲೇವಾರಿ ಮಾಡುತ್ತಾರೆ. ಶಕ್ತಿ ಮತ್ತು ಬಸವರಾಜು ಎಂಬುವವರು ಕದ್ದ ವಸ್ತುಗಳನ್ನು ವಿಲೇವಾರಿ ಮಾಡಲು ವರುಣ್‌ಗೆ ನೀಡುತ್ತಿದ್ದರು. ವರುಣ್ ತನ್ನ ತಾಯಿಯ ಮೂಲಕ ಈ ವಸ್ತುಗಳನ್ನು ವಿಲೇವಾರಿ ಮಾಡಿಸುತ್ತಿದ್ದ. ಈ ವಿಚಾರ ತಿಳಿದುಕೊಂಡ ರೌಡಿ ಶೀಟರ್‌ಗಳಾದ ಜೋಸೆಫ್ ಮತ್ತು ಪಾಗಲ್ ಸೀನ, ವರುಣ್ ಮತ್ತು ಆಕೆಯ ತಾಯಿಯಿಂದ ೨ ಲಕ್ಷ ರೂ. ಸುಲಿಗೆ ಮಾಡುವ ಉದ್ದೇಶದಿಂದ ತಮ್ಮ ಸಹಚರರೊಂದಿಗೆ ಆ.೧೩ರಂದು ಚಂದ್ರಾಲೇಔಟ್‌ನಿಂದ ತಾಯಿ-ಮಗನನ್ನು ಅಪಹರಣ ಮಾಡಿದ್ದರು. ಬಳಿಕ ಕೆಂಗೇರಿಯ ಪ್ರತಾಪ್ ಮತ್ತು ಸೌಮ್ಯ ಮನೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದರು.
ಮಹಿಳೆ ಮೇಲೆ ದೈಹಿಕ ದೌರ್ಜನ್ಯ:
ವರುಣ್ ಮತ್ತು ಆಕೆಯ ತಾಯಿಯ ಅಕ್ರಮ ಬಂಧನದ ವೇಳೆ ಆರೋಪಿಗಳು ಇಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಈ ವೇಳೆ ವರುಣ್ ತಾಯಿ ಮೇಲೆ ಲೈಂಗಿಕವಾಗಿ ಹಲ್ಲೆ ನಡೆಸಿ ನಡೆಸಿ, ೨ ಲಕ್ಷ ರೂ. ಹಣಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ ಇವರ ಬಳಿ ಹಣ ಇಲ್ಲ ಎಂಬುದನ್ನು ತಿಳಿದುಕೊಂಡು ಆ.೧೬ರಂದು ಬಿಟ್ಟು ಕಳುಹಿಸಿದ್ದರು. ಬಳಿಕ ಮಹಿಳೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸಿ ೯ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೌಡಿ ಶೀಟರ್‌ಗಳ ಕೈಚಳಕ:
ಆರೋಪಿಗಳ ಪೈಕಿ ಜೋಸೆಫ್ ಮತ್ತು ಪಾಗಲ್ ಸೀನ ರೌಡಿ ಶೀಟರ್‌ಗಳಾಗಿದ್ದಾರೆ. ಈ ತಾಯಿ-ಮಗನ ಅಪಹರಣ ಪ್ರಕರಣದಲ್ಲಿ ಇವರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಉಳಿದ ಆರೋಪಿಗಳು ಈ ರೌಡಿ ಶೀಟರ್‌ಗಳಿಗೆ ಪರಿಚಿತರಾಗಿದ್ದಾರೆ. ಈ ಪೈಕಿ ಆರೋಪಿಗಳಾದ ಸೌಮ್ಯಾ ಮತ್ತು ಪ್ರತಾಪ್ ಕೆಂಗೇರಿ ಬಳಿ ಉಪಾಹಾರ ಗೃಹ ನಡೆಸುವುದರ ಜತೆಗೆ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಇನ್ನು ಆರೋಪಿ ಆಟೋ ಚಾಲಕ ಸೈಯದ್ ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಹಿಂದೆ ಹಲ್ಲೆ ಪ್ರಕರಣ ದಾಖಲಾಗಿವೆ. ಆರೋಪಿಗಳಾದ ಜತಿನ್, ಸ್ವಾತಿ ಹಾಗೂ ಮಾದೇಶ್ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇಲ್ಲ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.