

ಬೆಂಗಳೂರು: ಇತ್ತೀಚೆಗೆ ಚಿಂದಿ ಆಯುವ ವ್ಯಕ್ತಿಗೆ ಸಿಕ್ಕಿದ್ದ ಮೂರು ಮಿಲಿಯನ್ ಡಾಲರ್ ಮೌಲ್ಯದ ಕರೆನ್ಸಿ ನೋಟುಗಳ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮೂಲದ ಭೀಕ್ಷುಕರಿಗೆ ಆಶ್ರಯ ನೀಡಿದ್ದ ಬಪ್ಪಾ ಎಂಬುವರನ್ನು ಅಪಹರಿಸಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಮೃತಹಳ್ಳಿ ನಿವಾಸಿ ಶರವಣ (೩೨) ಬಂಧಿತ. ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿ ತನ್ನ ಸಹಚರರ ಜತೆ ಸೇರಿ ನ.೭ರಂದು ರಾತ್ರಿ ಬಪ್ಪಾ ಎಂಬುವರನ್ನು ಅಪಹರಿಸಿದ್ದರು. ಆದರೆ, ಅವರ ಬಳಿ ಅಸಲಿ ಕರೆನ್ಸಿ ನೋಟುಗಳು ಇಲ್ಲ ಎಂಬುದು ಗೊತ್ತಾಗಿ ನ.೮ರಂದು ಬಿಟ್ಟು ಕಳುಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಶರವಣ ವಿರುದ್ಧ ಮೈಕೋ ಲೇಔಟ್, ಬಾಣಸವಾಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಈ ಹಿಂದೆ ಟ್ರಾವೆಲ್ಸ್ ನಡೆಸುತ್ತಿದ್ದ ಈತ, ಒಂದೆರಡು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದಾನೆ. ಜತೆಗೆ ಸ್ಥಳೀಯ ಗುಜರಿ ವ್ಯಾಪಾರಿಗಳ ಜತೆ ಪಾಲುದಾರನಾಗಿದ್ದಾನೆ.
ನ.೩ರಂದು ಬೆಳಗ್ಗೆ ಸಲೇಮಾನ್ ಎಂಬಾತ ನಾಗವಾರ ರೈಲು ನಿಲ್ದಾಣದ ಹಳಿ ಬಳಿ ಚಿಂದಿ ಆಯುವಾಗ ೩೦ ಲಕ್ಷ ರೂ. ಮೌಲ್ಯದ ಅಮೆರಿಕಾ ಡಾಲರ್ ನೋಟುಗಳ ಬಂಡಲ್ ತುಂಬಿದ ಪ್ಲಾಸ್ಟಿಕ್ ಚೀಲ ಪತ್ತೆಯಾಗಿತ್ತು. ಬಳಿಕ ತನ್ನ ಆಶ್ರಯದಾತ ಬಪ್ಪನಿಗೆ ಅದರ ವಿಡಿಯೋ ಕಳುಹಿಸಿ ಮಾಹಿತಿ ನೀಡಿದ್ದ. ಆತ ಸಾಮಾಜಿಕ ಕಾರ್ಯಕರ್ತ ಖಲೀಮುಲ್ಲಾ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ತಲುಪಿಸಿದ್ದರು. ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಹೆಬ್ಬಾಳ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ವೇಳೆ ಪತ್ತೆಯಾದ ನೋಟುಗಳು ಕಲರ್ ಜೆರಾಕ್ಸ್ ಎಂಬುದು ಪತ್ತೆಯಾಗಿತ್ತು.
ವಿಡಿಯೋ ನೋಡಿ ಅಪಹರಣ
ಲಕ್ಷಾಂತರ ರೂ. ಮೌಲ್ಯದ ವಿದೇಶಿ ಕರೆನ್ಸಿ ವಿಡಿಯೋ ಪಶ್ಚಿಮ ಬಂಗಾಳ ಮೂಲದ ಭೀಕ್ಷುಕರ ವಾಟ್ಸ್‌ಆ್ಯಪ್ ಗ್ರೂಪ್ ಹಾಗೂ ಅವರ ನಿರ್ವಹಕರ ಗ್ರೂಪ್‌ಗಳಲ್ಲಿ ಶೇರ್ ಆಗಿತ್ತು. ಅದನ್ನು ಗಮನಿಸಿದ ವ್ಯಕ್ತಿಯೊಬ್ಬ ಶರವಣನಿಗೆ ಮಾಹಿತಿ ನೀಡಿದ್ದ. ಹೀಗಾಗಿ ಬಪ್ಪನನ್ನು ಅಪಹರಿಸಿ, ವಿದೇಶಿ ಕರೆನ್ಸಿಯನ್ನು ಭಾರತೀಯ ನೋಟುಗಳನ್ನಾಗಿ ಪರಿವರ್ತಿಸಿಕೊಂಡು ಹಂಚಿಕೊಳ್ಳಲು ನಿರ್ಧರಿಸಿ, ತನ್ನ ಸಹಚರರ ಮೂಲಕ ಬಪ್ಪನನ್ನು ಅಪಹರಿಸಿದ್ದರು. ಆದರೆ, ಆತನ ಬಳಿ ಯಾವುದೇ ನೋಟುಗಳು ಇಲ್ಲ ಎಂಬುದು ಗೊತ್ತಾಗಿ ಮರು ದಿನ ಬಿಟ್ಟು ಕಳುಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.