ಸೌದಿ ಅರೇಬಿಯಾದಿಂದ ವಾಪಸ್ಸಾದ ಎನ್​ಆರ್​ಐ ಅಪಹರಿಸಿ ಹತ್ಯೆ: ಕಾರಣ ನಿಗೂಢ

saudiarabia
Published on

ಕಾಸರಗೋಡು: ಸೌದಿ ಅರೇಬಿಯಾದಿಂದ ವಾಪಸ್ಸಾದ ಮಾರನೇ ದಿನವೇ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬನನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೃತನನ್ನು ಕುಂಬ್ಳಾದ ಮುಗು ನಿವಾಸಿ ಅಬೂಬಕ್ಕರ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಹಣಕಾಸಿನ ವಿಚಾರವಾಗಿ ಗಲಾಟೆಯಾಗಿ ಸಿದ್ದಿಕಿಯನ್ನು ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಕಾಸರಗೋಡು ಡಿವೈಎಸ್ ಪಿ ಪಿ ಬಾಲಕೃಷ್ಣನ್ ಹೇಳಿದ್ದಾರೆ.

ಉಪ್ಪಾಳದ ಬಂಡಿಯೊಡಿಯಲ್ಲಿನ ಖಾಸಗಿ ಆಸ್ಪತ್ರೆ ಮುಂಭಾಗ ಶುಕ್ರವಾರ ರಾತ್ರಿ ಸಿದ್ದಿಕಿ ಮೃತದೇಹವನ್ನು ಎಸೆಯಲಾಗಿದ್ದ ಕಾರಿನ ಮಾಲೀಕ ಮತ್ತು ಸ್ನೇಹಿತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ್ದರಿಂದ ಈ ಇಬ್ಬರನ್ನು ಬಂಧಿಸಲಾಗಿದೆ.

ಸಿದ್ಧಿಕಿಯನ್ನು ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿದ ನಂತರ ಆತ ಹೃದಯಾಘಾತದಿಂದ ಸಾವನ್ನಪ್ಪಿರಬಹುದು, ಆತನ ಕಾಲಿನ ಮೇಲೆ ನೀಲಿಗಟ್ಟಿದ ಗುರುತುಗಳಿವೆ. ಅದು ಬಿಟ್ಟರೆ ಬೇರೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

ಶುಕ್ರವಾರ ಸಿದ್ದಕಿ ಸಹೋದರ ಅನ್ವರ್ ಮತ್ತು ಸಂಬಂಧಿ ಅನ್ಸಾರ್ ಅವರನ್ನು ಅಪಹರಿಸಲಾಗಿತ್ತು. ಇವರಿಬ್ಬರನ್ನು ಬಳಸಿಕೊಂಡ ಗ್ಯಾಂಗ್, ಸಿದ್ದಿಕಿಯನ್ನು ಕಾಸರಗೋಡಿಗೆ ಒತ್ತಾಯದಿಂದ ಕರೆಸಿ, ಸೌದಿಯಿಂದ ಮರಳಿದ ದಿನವೇ ಅಪಹರಿಸಿ ಮಾರನೇ ದಿನವೇ ಹತ್ಯೆ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net