ಫ್ಯಾಂಟಮ್​ನಲ್ಲಿ ಕಿಚ್ಚ ವಿಕ್ರಾಂತ್ ರೋಣ

Kichcha 2 Mrch 20
Published on

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಫ್ಯಾಂಟಮ್ ಘೋಷಣೆಯಾಗಿ ಹಲವು ದಿನಗಳೇ ಕಳೆದಿದ್ದರೂ, ಶೂಟಿಂಗ್ ಯಾವಾಗ ಎಲ್ಲಿ ಎಂಬ ಬಗ್ಗೆ ಮಾಹಿತಿ ರಹಸ್ಯವಾಗಿಯೇ ಉಳಿದಿತ್ತು. ಇದೀಗ ಚಿತ್ರೀಕರಣ ಆರಂಭವಾಗಿರುವುದರಿಂದ ಆ ಸಿನಿಮಾ ಕುರಿತ ಕೌತುಕ ಗರಿಗೆದರಿದ್ದು, ಅಭಿಮಾನಿಗಳಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.

‘ರಂಗಿ ತರಂಗ’ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಸೋಮವಾರ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದೆ. ‘ಮೊದಲ ಹಂತದಲ್ಲಿ ಬೆಂಗಳೂರು, ಹೈದರಾಬಾದ್​ನಲ್ಲಿ ಶೂಟಿಂಗ್ ಯೋಜನೆ ಹಾಕಿಕೊಂಡಿದ್ದೇವೆ. ಸೋಮವಾರ ಚಿತ್ರೀಕರಣ ಆರಂಭವಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್​ನಲ್ಲೇ ನಡೆಯಲಿದ್ದು, ಶೇ. 20 ಮಾತ್ರ ಹೊರಾಂಗಣದಲ್ಲಿ ಆಗಲಿದೆ’ ಎಂದಿದ್ದಾರೆ ಅನೂಪ್. ‘ಚಿತ್ರದ ಕಥೆ ಒಂದಾನೊಂದು ಕಾಲದಲ್ಲಿ ಎಂಬಂತೆ ಸಾಗಲಿರುವುದರಿಂದ ಸೆಟ್​ಗಳು ಅನಿವಾರ್ಯ. ಇನ್ನು ಕೆಲ ದೃಶ್ಯಗಳು ವಿಶಿಷ್ಟವಾಗಿರುವುದರಿಂದ ಅದನ್ನು ಸೆಟ್​ನಲ್ಲೇ ಶೂಟಿಂಗ್ ಮಾಡಬೇಕಿದೆ. ಸುದೀಪ್ ಕೂಡ ತುಂಬ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ಕೆಲವು ಹಾಡುಗಳಿಗೂ ಅವರೇ ಸಾಹಿತ್ಯ ರಚಿಸಿದ್ದಾರೆ. ಚಿತ್ರದ ನಾಯಕಿ, ಸಂಗೀತ ನಿರ್ದೇಶಕ ಸೇರಿ ಇತರ ಮಾಹಿತಿಗಳನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ. ಅಂದಹಾಗೆ, ಇದೂ ಪ್ಯಾನ್ ಇಂಡಿಯಾ ಸಿನಿಮಾ ಆಗುವ ಸಾಧ್ಯತೆ ಇದೆ. ‘ಸುದೀಪ್ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಬಹುಭಾಷೆಗಳಲ್ಲಿ ಮೂಡಿಬರಲಿದೆ. ಎಷ್ಟು ಭಾಷೆ ಎಂಬಿತ್ಯಾದಿ ವಿಷಯ ಇನ್ನೂ ಅಂತಿಮಗೊಳಿಸಿಲ್ಲ’ ಎನ್ನುತ್ತಾರೆ ನಿರ್ದೇಶಕರು. ‘ಶಾಲಿನಿ ಆರ್ಟ್ಸ್’ ಬ್ಯಾನರ್​ನ ಈ ಸಿನಿಮಾಗೆ ಶಾಲಿನಿ ಮಂಜುನಾಥ್, ಜಾಕ್ ಮಂಜು ನಿರ್ವಪಕರು.

‘ಫ್ಯಾಂಟಮ್​ನಲ್ಲಿ ‘ವಿಕ್ರಾಂತ್ ರೋಣ’ ಎಂಬ ಪಾತ್ರ ಮಾಡುತ್ತಿ ದ್ದೇನೆ. ಅನೂಪ್ ಭಂಡಾರಿ ವಿನೂತನ ರೀತಿಯಲ್ಲಿ ರೂಪಿಸಿರುವ ಈ ಪಾತ್ರಕ್ಕೆ ಸಂಪೂರ್ಣ ಹೊಸತನ ನೀಡುವ ಪ್ರಯತ್ನ ದಲ್ಲಿದ್ದೇನೆ. ನೀವೆಲ್ಲ ಇದನ್ನು ಎಂಜಾಯ್ ಮಾಡುತ್ತೀರಿ ಎಂದು ಭಾವಿಸಿದ್ದೇನೆ. | ಸುದೀಪ್ ,ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net