

ಬಿಗ್‌ಬಾಸ್ ಶೋ ಚಿನ್ನದ ಮೊಟ್ಟೆ ಇಡುವ ಕೋಳಿ. ಶೋ ಆಯೋಜಕರಿಗೆ, ಸ್ಪರ್ಧಿಗಳಿಗೆ, ಅಷ್ಟೇ ಅಲ್ಲಿ ಶೋಗಾಗಿ ಕೆಲಸ ಮಾಡುವ ಸಿಬ್ಬಂದಿ ಹೀಗೆ ಎಲ್ಲರಿಗೂ ಒಳ್ಳೆ ಆದಾಯವಿದೆ. ಇನ್ನು ಇಡೀ ಶೋ ಕೇಂದ್ರಬಿಂದು ನಿರೂಪಕ ಸುದೀಪ್ ಅವರಿಗೂ ಭರ್ಜರಿ ಸಂಭಾವನೆ ಸಿಗುತ್ತಿದೆ. ಸಂಭಾವನೆ ಕಾರಣಕ್ಕೆ ನಾನು ಶೋನಿಂದ ಹೊರಬರುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಸುದೀಪ್ ಹೇಳಿಕೊಂಡಿದ್ದರು.
ಮೊದಲ ಸೀಸನ್‌ನಿಂದಲೂ ಕಿಚ್ಚನಿಗೆ ಒಳ್ಳೆ ಸಂಭಾವನೆಯೇ ಸಿಗುತ್ತಿದೆ.11ನೇ ಸೀಸನ್ ಕೂಡ ಮೊದಲ ವಾರವೇ ಭರ್ಜರಿ ಟಿಆರ್‌ಪಿ ಗಿಟ್ಟಿಸಿದೆ.
2013ರಲ್ಲಿ ಮೊದಲಿಗೆ ಬಿಗ್‌ಬಾಸ್ ಕನ್ನಡ ಸೀಸನ್-1 ಆರಂಭವಾಗಿತ್ತು. ಮೊದಲ 5 ಸೀಸನ್‌ಗಳಿಗೆ ಒಟ್ಟಿಗೆ ಸುದೀಪ್ ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ 20 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅಂದ್ರೆ ಪ್ರತಿ ಸೀಸನ್‌ಗೆ 4 ಕೋಟಿ ರೂ. ಸಂಬಳ ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ. ಅಲ್ಲಿಂದ ಮುಂದೆ ಪ್ರತಿ ಸೀಸನ್‌ಗೆ ಸುದೀಪ್ ಸಂಭಾವನೆ ಹೆಚ್ಚುತ್ತಾ ಬಂದಿತ್ತು.
ಈ ಬಾರಿ ಶೋ ನಿರೂಪಣೆಗೆ ಕಿಚ್ಚ ಬರೋಬ್ಬರಿ 8 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇದೆಲ್ಲಾ ಬರೀ ಊಹಾಪೋಹ ಅಷ್ಟೆ. ಪ್ರತಿಬಾರಿ ಹೊಸ ಸೀಸನ್ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಡಲಾಗುತ್ತಿದೆ. ಈ ಹಿಂದೆ ಸುದ್ದಿಗೋಷ್ಠಿಗಳಲ್ಲಿ ಸುದೀಪ್ ಸಂಭಾವನೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆದರೆ ಅದಕ್ಕೆ ಸುದೀಪ್ ಜಾಣ ಉತ್ತರವನ್ನೇ ನೀಡಿದ್ದರು.