ಬಿಜೆಪಿ ಸರ್ಕಾರಕ್ಕೆ ಖುರ್ಷಿದ್ ಶ್ಲಾಘನೆ

khursid
Published on

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ್ದಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಬಿಜೆಪಿ ನೇತೃತ್ವದ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಆಪರೇಷನ್ ಸಿಂಧೂರ ಮೂಲಕ ಭಾರತ ಪ್ರಬಲವಾದ ಮಿಲಿಟರಿ ಪ್ರತಿಕ್ರಿಯೆ ದಾಖಲಿಸಿದ್ದಕ್ಕೂ ಮಾಜಿ ಕೇಂದ್ರ ಸಚಿವರೂ ಆದ ಖುರ್ಷಿದ್ ಮೆಚ್ಚುಗೆ ಸೂಚಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ನಡೆಸಿದ ಕಠಿಣ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾರತದ ನಿಲುವನ್ನು ವಿವರಿಸಿ ಜಾಗತಿಕ ಬೆಂಬಲ ಕ್ರೋಡೀಕರಿಸುವ ಉದ್ದೇಶದಿಂದ ಏಷ್ಯಾ ಪ್ರವಾಸ ನಡೆಸುತ್ತಿರುವ ಸರ್ವ-ಪಕ್ಷ ನಿಯೋಗದಲ್ಲಿ ಖುರ್ಷಿದ್ ಕೂಡ ಒಬ್ಬ ಸದಸ್ಯರಾಗಿರುವುದು ಗಮನಾರ್ಹವಾಗಿದೆ.

ಪಿಒಕೆ ಭಾರತಕ್ಕೆ ಮರಳಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಮರಳಬೇಕೆಂಬ ದೀರ್ಘಕಾಲೀನ ಬೇಡಿಕೆಯನ್ನು ಕೂಡ ಖುರ್ಷಿದ್ ಮರುದೃಢೀಕರಿಸಿದರು. 370ನೇ ವಿಧಿಯ ರದ್ದತಿಯು ಈ ವಲಯದಲ್ಲಿ ಸಮೃದ್ಧಿ ಮತ್ತು ಜನತಾಂತ್ರಿಕ ಪ್ರಗತಿಗೆ ದಾರಿ ಮಾಡಿದೆ. 2019ರಲ್ಲಿ ಕೈಗೊಂಡ ಈ ಕ್ರಮದಿಂದಾಗಿ, ಜಮ್ಮು ಮತ್ತು ಕಾಶ್ಮೀರವು ಭಾರತದಿಂದ ಪ್ರತ್ಯೇಕವಾದ ಒಂದು ಪ್ರದೇಶ ಎಂಬ ಭಾವನೆಯನ್ನು ಕೊನೆಗೊಳಿಸಿತು ಎಂದು ಸಂದರ್ಶನವೊಂದರಲ್ಲಿ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಅಭಿಪ್ರಾಯ ಪಟ್ಟರು. ದೇಶದ ಒಂದು ಭಾಗವಾದ ಕಾಶ್ಮೀರವನ್ನು ಬಿಟ್ಟುಕೊಡಿ ಎಂದು ಯಾರೂ ಹೇಳಲಾಗದು. ನಮ್ಮದು ಒಂದು ಕುಟುಂಬವಾಗಿದ್ದು ಅದನ್ನು ಮುರಿಯಲು ಯಾರಿಗೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಶಾಂತಿಗೆ ಬದ್ಧತೆಯಿದ್ದರೆ ಮತ್ತು ಭಯೋತ್ಪಾದನೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದರೆ ಮಾತ್ರವೇ ಪಾಕ್​ನೊಂದಿಗೆ ಮಾತುಕತೆ ಸಾಧ್ಯ ಎಂಬುದು ಭಾರತದ ದೃಢವಾದ ಧೋರಣೆಯಾಗಿದೆ ಎಂದು ಖುರ್ಷಿದ್ ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net