

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶವನ್ನುದ್ಧೇಶಿಸಿ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರುಹಾಜರಾಗಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.
ತಾವು ಗೈರುಹಾಜರಾಗಿರುವ ಕುರಿತು ಸ್ಪಷ್ಟನೆ ನೀಡಿದ ಖರ್ಗೆ ಕಣ್ಣಿನ ಸಂಬಂಧಿತ ಸಮಸ್ಯೆ ಹಾಗೂ ಭದ್ರತೆಯ ಕಾರಣದಿಂದಾಗಿ ತಾವು ಕಾರ್ಯಕ್ರಮ ತಪ್ಪಿಸಿಕೊಂಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಈ ಕುರಿತು ಮಾತನಾಡಿದ ಖರ್ಗೆ ಮೊದಲನೆಯದಾಗಿ ನನಗೆ ಸ್ವಲ್ಪ ಕಣ್ಣಿನ ಸಮಸ್ಯೆಗಳಿವೆ. ಎರಡನೇಯದಾಗಿ ಶಿಷ್ಟಾಚಾರದ ಪ್ರಕಾರ 9:20ಕ್ಕೆ ನಾನು ನನ್ನ ನಿವಾಸದಲ್ಲಿ ಧ್ವಜಾರೋಹಣ ಮಾಡಿದ ನಂತರ ಕಾಂಗ್ರೆಸ್ ಕಚೇರಿಗೆ ತೆರಳಬೇಕಿತ್ತು.
ಕೆಂಪುಕೋಟೆಯಲ್ಲಿನ ಭದ್ರತೆಯ ಕಾರಣದಿಂದಾಗಿ ನಾನು ಇಂದು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಪ್ರಧಾನಿ ಭಾಷಣ ಮುಗಿದು ಅವರು ನಿರ್ಗಮಿಸಿದ ಬಳಿಕ ಬೇರೆಯವರನ್ನು ಹೊರಬಿಡುತ್ತಾರೆ. ಆಗಾಗಿ ನಾನು ಸಮಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ ಎಂಬ ಕಾರಣಕ್ಕೆ ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.