

ಬೆಂಗಳೂರು: ದೆಹಲಿಯಲ್ಲಿ ಮುಂಗೇರಿಲಾಲ್ ಕಿ ಹಸೀನ್ ಸಪ್ನೆ (ಮುಂಗೇರಿಲಾಲನ ಸುಂದರ ಸ್ವಪ್ನಗಳು) ಎಂಬ ಮಾತಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಮಾಡುವ ಕನಸು ಕಾಣುವ ಮೊದಲ ಅಗತ್ಯ ಸಂಸದರು, ಸ್ಥಾನ ಗಳಿಕೆ ಬಗ್ಗೆ ಚಿಂತಿಸಲಿ ಎಂದು ಬಿಜೆಪಿ ದೆಹಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಲ್‌ಜಿತ್ ಸಿಂಗ್ ಚಹಲ್ ಲೇವಡಿ ಮಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು ಅತ್ಯಂತ ಕಡಿಮೆ ಸಂಸದರನ್ನು ಹೊಂದಿರುವ ಕಾಂಗ್ರೆಸ್, ತಾನು ಪ್ರೇರಣೆ ನೀಡಿದ ಐಎನ್‌ಡಿಎ ಒಕ್ಕೂಟದಲ್ಲಿ ಸಮಸ್ಯೆ ಎದುರಿಸುತ್ತಿದೆ. ಕಾಂಗ್ರೆಸ್‌ನದು ಕೇವಲ ಹಗಲುಗನಸಷ್ಟೇ ಎಂದು ಕಿಚಾಯಿಸಿದರು.
ಉತ್ತರದ ದೊಡ್ಡ ಮೂರು ರಾಜ್ಯಗಳ ಚುನಾವಣಾ ಲಿತಾಂಶವು ಮೋದಿ ಗ್ಯಾರಂಟಿಯ ಪರವಾಗಿದೆ. ಪಕ್ಷವು 2019ಕ್ಕಿಂತ ಹೆಚ್ಚು ಸ್ಥಾನಗಳೊಂದಿಗೆ 2024ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದು ಭವಿಷ್ಯ ನುಡಿದರು.
ಆಪ್ ಮುಖಂಡರು ಕಡು ಭ್ರಷ್ಟಾಚಾರಿಗಳು ಎಂಬುದು ಸ್ಪಷ್ಟವಾಗಿದೆ. ಮದ್ಯ ಹಗರಣದಲ್ಲಿ ದೆಹಲಿಯ ಇಬ್ಬರು ಸಚಿವರು, ಒಬ್ಬ ಸಂಸದ ಈಗಾಗಲೇ ಜೈಲಿನಲ್ಲಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾ ಸರದಿ ಬರಲಿದೆ ಎಂದರು.
ಉಪರಾಷ್ಟ್ರಪತಿಗೆ ಅಪಮಾನಿಸಿದ ವಿಪಕ್ಷಗಳಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ. ವಿಪಕ್ಷಗಳ ಸಂಸದರು ತಮ್ಮ ಸ್ಥಾನಕ್ಕೆ ತಕ್ಕುದಾಗಿ ವರ್ತಿಸುತ್ತಿಲ್ಲ. ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ.
ಉಪರಾಷ್ಟ್ರಪತಿ ಅಣಕವನ್ನು ರಾಹುಲ್ ಗಾಂಧಿ ವಿಡಿಯೋ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಸಂಸದನಂತೆ ವರ್ತಿಸುತ್ತಿಲ್ಲವೆಂದು ಕುಲ್‌ಜಿತ್ ಸಿಂಗ್ ಚಹಲ್ ಬೇಸರ ವ್ಯಕ್ತಪಡಿಸಿದರು.