

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲಿ ತಮ್ಮ ಪತ್ನಿಯ ಹೆಸರಿಗೆ ಮಂಜೂರಾಗಿದ್ದ 14 ನಿವೇಶನ ವಾಪಸ್ ಮಾಡಿ, ಪ್ರಕರಣ ತೀವ್ರತೆ ಕಡಿಮೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಸರಿಸಿದ ಹಾದಿಯನ್ನೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಹಿಡಿದಿದ್ದಾರೆ.
ಈ ನಿರ್ಧಾರ ಮುಖೇನ ಹೊಸ ಚರ್ಚೆಗೂ ನಾಂದಿ ಹಾಡಿದ್ದಾರಲ್ಲದೇ, ಪ್ರಕರಣ ಬೇರೆ ದಿಕ್ಕಿಗೆ ಹೋಗುವುದಕ್ಕೆ ತಡೆ ಹಾಕಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿಪಡಿಸಿದ್ದ ಸಿಎ ನಿವೇಶನ ಹಂಚಿಕೆಯಾಗಿತ್ತು. ಏರೋಸ್ಪೇಸ್ ಮತ್ತು ಹೈಟೆಕ್ ಡಿೆನ್ಸ್ ಪಾರ್ಕ್‌ನಲ್ಲಿ ಐದು ಎಕರೆ ನಿವೇಶನ ಟ್ರಸ್ಟ್‌ಗೆ ಮಂಜೂರಾಗಿತ್ತು.
ಪರಿಶಿಷ್ಟ ಜಾತಿ ಪಂಗಡದ ಕೋಟಾದಡಿಯಲ್ಲಿ ಒಟ್ಟು ಆರು ಮಂದಿ ಈ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಕೂಡ ಇತ್ತು. ಅರ್ಜಿಯನ್ನು ಆದ್ಯತೆ ಮೇಲೆ ಪರಿಗಣಿಸಿದ್ದ ಏಕಗವಾಕ್ಷಿ ಸಮಿತಿ ಅಪೂರ್ಣ ದಾಖಲೆ ಕಾರಣಕ್ಕೆ ನಾಲ್ಕು ಅರ್ಜಿ ತಿರಸ್ಕರಿಸಿತ್ತು.
ಈ ಐದು ಎಕರೆ ಜಾಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ ಕೇಂದ್ರ ತೆರೆಯಲು 25 ಕೋಟಿ ರೂ. ಹೂಡಿಕೆ ಮಾಡುವುದಾಗಿಯೂ, ಇದರಿಂದ 150 ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಟ್ರಸ್ಟ್ ಪ್ರಸ್ತಾವನೆ ಮಾಡಿತ್ತು.