

ಧ್ರುವ ಸರ್ಜಾ ನಾಯಕತ್ವದ ಪೊಗರು ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮಾಡಿಕೊಂಡಿದೆ. ಇನ್ನುಳಿದ ಎರಡು ಹಾಡು ಮತ್ತು ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡರೆ, ಸಿನಿಮಾ ಮುಕ್ತಾಯವಾಗಲಿದೆ. ಇನ್ನು ಇತ್ತೀಚೆಗೆ ಹಾಡಿನ ಮೂಲಕವೇ ಪೊಗರು ಸಿನಿಮಾ ಸದ್ದು ಮಾಡಿತ್ತು. ಖರಾಬು ಟೈಟಲ್ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ತೆಲುಗು ಮಂದಿಗೂ ಈ ಹಾಡನ್ನು ತಲುಪಿಸುವ ಕೆಲಸ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಅಂದರೆ, ಈ ಹಿಂದೆ ಸುದ್ದಿಯಾದಂತೆ ಕನ್ನಡದ ಜತೆಗೆ ತೆಲುಗಿನಲ್ಲೂ ಪೊಗರು ಸಿನಿಮಾ ತೆರೆಕಾಣುತ್ತಿದೆ. ಹಾಗಾಗಿ ಕನ್ನಡದಲ್ಲಿ ಬಿಡುಗಡೆಯಾಗಿ ಬಾರಿ ಮೆಚ್ಚುಗೆ ಪಡೆದುಕೊಂಡಿದ್ದ ಖರಾಬು ಹಾಡನ್ನು ತೆಲುಗಿನಲ್ಲೂ ಬಿಡುಗಡೆ ಮಾಡಲಾಗುತ್ತಿದ್ದು, ಆಗಸ್ಟ್ 6ರಂದು ತೆಲುಗು ಅವತರಣಿಕೆ ರಿಲೀಸ್ ಆಗಲಿದೆ.
ಕನ್ನಡದಲ್ಲಿ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಧ್ವನಿ ಸಹ ನೀಡಿದ್ದರು. ಇದೀಗ ತೆಲುಗಿನಲ್ಲಿ ಭಾಸ್ಕರ್ ಬಾಟ್ಲಾ, ರವಿ ಕುಮಾರ್ ಸಾಹಿತ್ಯ ಬರೆದಿದ್ದು, ಅಲಾ ವೈಕುಂಠಪುರಂಲೋ ಚಿತ್ರ ಖ್ಯಾತಿಯ ರಾಮುಲೋ ರಾಮುಲೊ ಹಾಡಿಗೆ ಧ್ವನಿ ನೀಡಿದ್ದ ಅನುರಾಗ್ ಸಿಂಗ್ ಈ ಹಾಡಿಗೂ ಧ್ವನಿ ನೀಡಿದ್ದಾರೆ.
ಇನ್ನು ಬಾಕಿ ಉಳಿದ ಚಿತ್ರೀಕರಣವನ್ನು ಆಗಸ್ಟ್ನಿಂದ ಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಬಿ.ಕೆ ಗಂಗಾಧರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.