ಪುಣ್ಯದ ಕಾರ್ಯ ಮಾಡುತ್ತ ಭಗವಂತನ ಕೃಪೆಗೆ ಪಾತ್ರರಾಗೋಣ; ಡಾ. ಶಿವಾನಂದ ಭಾರತಿ ಸ್ವಾಮೀಜಿ

29-RNR-03A
Published on


ರಾಣೆಬೆನ್ನೂರ: ಹಲವಾರು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ಪ್ರತಿಯೊಬ್ಬ ಮನುಷ್ಯನು ತನ್ನ ಜೀವಿತದ ಅವಧಿಯಲ್ಲಿ ಪುಣ್ಯದ ಕಾರ್ಯಗಳನ್ನು ಮಾಡುವುದರೊಂದಿಗೆ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ಇಂಚಲ ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಖಂಡೇರಾಯನಹಳ್ಳಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ಬುಧವಾರ ಏರ್ಪಡಿಸಿದ್ದ 30ನೇ ವೇದಾಂತ ಪರಿಷತ್ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಜ ತನ್ನ ಜೀವಿತ ಕಾಲದಲ್ಲಿ ಮನಸ್ಸು, ಬುದ್ಧಿ, ಚಿತ್ತ ಎಲ್ಲಿಯವರೆಗೂ ಶುದ್ಧವಾಗಿರುವುದಿಲ್ಲವೋ ಅಲ್ಲಿಯವರೆಗೂ ಶಾಂತಿ, ನೆಮ್ಮದಿ, ಸಂತೃಪ್ತಿ, ಮುಕ್ತಿ ಸಿಗುವುದಿಲ್ಲ. ಸಿದ್ಧಾರೂಢರು ಸರ್ವ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಲೆಂಬ ಸಂಕಲ್ಪದಿಂದ ಜಾತಿ, ಮತ, ಪಂಥಗಳ ಬೇಧವಿಲ್ಲದೆ ಶಾಂತಿ ಮಂತ್ರವನ್ನು ಬೋಧಿಸಿದ ಮಹಾತ್ಮರು. ಅಂತವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಜಾತಿಯ ಸೋಂಕು ತಗುಲದೆ ಸರ್ವರೂ ಒಂದಾಗಿ ಬಾಳಲು ಸಾಧ್ಯ.
ಸತ್ಸಂಗವು ಜನ್ಮಜನ್ಮಾಂತರ ಪಾಪಕರ್ಮಗಳು ನಾಶವಾಗಿ ಮುಕ್ತಿಯನ್ನು ಪಡೆಯಲು ಪೂರಕವಾಗಿದೆ. ಮನುಷ್ಯನನ್ನು ಒತ್ತಡದ ಜೀವನದಿಂದ ಬಿಡುಗಡೆ ಪಡೆದು ಮುಕ್ತಿಯ ಕಡೆಗೆ ಕೊಂಡೊಯ್ಯುವ ಸನ್ಮಾರ್ಗವಾಗಿದೆ ಎಂದರು.
ದಾವಣಗೆರೆಯ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನದ ಬಂಡಿಗೆ ಸಾರಥಿ ಬುದ್ಧಿಯಾಗಿದ್ದು ಸಾರಥಿ ಸರಿಯಾದ ಮಾರ್ಗದಲ್ಲಿ ಸಾಗಿದಾಗ ಮೋಕ್ಷದ ಗುರಿಮುಟ್ಟಲು ಸಾಧ್ಯ. ಮಹಾಭಾರತದಲ್ಲಿ ಕರ್ಣನಿಗೆ ಸರಿಯಾದ ಸಾರಥಿ ಇರದ ಕಾರಣ ಅವನು ಸೋಲು ಕಂಡನು. ಅದೇ ಅರ್ಜುನನಿಗೆ ಬುದ್ಧಿ ಎಂಬ ಶ್ರೀಕೃಷ್ಣ ಪರಮಾತ್ಮ ಸಾರಥಿಯಾಗಿದ್ದರಿಂದ ಗೆಲುವೆಂಬ ಗುರಿ ಮುಟ್ಟಲು ಸಾಧ್ಯವಾಯಿತು ಎಂದರು.
ಮಠದ ಪೀಠಾಧಿಪತಿ ನಾಗರಾಜಾನಂದ ಸ್ವಾಮಿಜಿ ನೇತೃತ್ವ ವಹಿಸಿದ್ದರು. ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಛಿದಾನಂದ ಸ್ವಾಮೀಜಿ, ಹದಡಿಯ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ, ಮಣಕೂರ ಸಿದ್ಧಾರೂಢ ಗುರುದೇವಾಶ್ರಮದ ಮಾತಾಜಿ, ಚನ್ನಬಸಮ್ಮನವರು, ಗೋಕಾಕ ತಾಲೂಕು ಹಡಗಿನಾಳದ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವಿಧಾನಸಭೆ ಉಪ ಸಭಾಧ್ಯಕ್ಷ ಹಾಗೂ ಮಠದ ಕಾರ್ಯದರ್ಶಿ ರುದ್ರಪ್ಪ ಲಮಾಣಿ, ಗ್ರಾಪಂ ಅಧ್ಯಕ್ಷೆ ಲಲಿತವ್ವ ಹಿರೇಬಿದರಿ, ಉಪಾಧ್ಯಕ್ಷೆ ನೀಲಮ್ಮ ಪೂಜಾರ, ಸದಸ್ಯರಾದ ಮಲ್ಲೇಶಪ್ಪ ತೋಟಗೇರ, ಶಕುಂತಲಾ ಕೊಡ್ಲೇರ, ಮಠದ ಅಧ್ಯಕ್ಷ ಫಕ್ಕೀರಪ್ಪಗೌಡ್ರ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕೂಸಗೂರ, ಜನಾರ್ಧನ ಕಡೂರ, ವಕೀಲ ಎಂ.ಬಿ. ಚಿನ್ನಪ್ಪನವರ, ಡಾಕೇಶ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net