

ಟೆಲ್ಅವೀವ್: ಇಸ್ರೇಲ್ ಮತ್ತು ಇರಾನ್ ನಡುವೆ ನಡೆದ 12 ದಿನಗಳ ಸಂಘರ್ಷದ ವೇಳೆ ಇರಾನ್ನ ಸವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಲು ಇಸ್ರೇಲ್ ಸಜ್ಜಾಗಿತ್ತು. ಆದರೆ ಖಮೇನಿ ಭೂಗತರಾಗಿ ಹತ್ಯೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕಾಟ್ಜ್ ‘ಸಂಘರ್ಷದ ವೇಳೆ ಖಮೇನಿ ಇರುವ ಸ್ಥಾನದ ಕುರಿತು ನಮಗೆ ಮಾಹಿತಿ ಲಭಿಸಿದ್ದರೆ ನಮ್ಮ ಸೇನೆ ಅವರನ್ನು ಹೊಡೆದುರುಳಿಸುತ್ತಿತ್ತು. ಆದರೆ ಖಮೇನಿ ಭೂಗತರಾಗುವ ಮೂಲಕ ತಮ್ಮ ಕಮಾಂಡರ್ಗಳ ಜತೆ ಸಂಪರ್ಕ ಕಡಿದುಕೊಂಡಿದ್ದರು. ಖಮೇನಿ ಅಡಗಿರುವ ತಾಣದ ಕುರಿತು ಸಾಕಷ್ಟು ಶೋಧ ನಡೆಸಿದರೂ ಅದು ಪತ್ತೆಯಾಗಿರಲಿಲ್ಲ. ಖಮೇನಿಯನ್ನು ಹತ್ಯೆ ಮಾಡಿ ಆಡಳಿತ ಬದಲಿಸುವ ಆಲೋಚನೆ ಹೊಂದಿರಲಿಲ್ಲ, ಆದರೆ ಅವರನ್ನು ಹತ್ಯೆ ಮಾಡುವ ಮೂಲಕ ಇರಾನ್ ನಾಯಕತ್ವ ಅಸ್ಥಿರಗೊಳಿಸುವುದು ನಮ್ಮ ಉದ್ದೇಶವಾಗಿತ್ತು’ ಎಂದು ತಿಳಿಸಿದ್ದಾರೆ.
ಖಮೇನಿಯನ್ನು ಹತ್ಯೆ ಮಾಡುವುದಕ್ಕೆ ನಮಗೆ ಅಮೆರಿಕದ ಅನುಮತಿ ಅಗತ್ಯವಿಲ್ಲ. ಕಳೆದ ವರ್ಷ ಹಿಜ್ಬುಲ್ಲಾ ನಾಯಕ ಹಸನ್ ನಸ್ರುಲ್ಲಾನನ್ನು ಹೊಡೆದುರುಳಿಸಿದಂತೆ ಖಮೇನಿಯನ್ನೂ ಹೊಡೆದುರುಳಿಸಬಹುದು. ಹಾಗಾಗಿ ಖಮೇನಿ ತಲೆಮರೆಸಿಕೊಂಡಿರುವುದು ಉತ್ತಮ. ಅವರು ನಸ್ರುಲ್ಲಾ ಹತ್ಯೆಯಿಂದ ಪಾಠ ಕಲಿಯಬೇಕು ಎಂದು ಕಾಟ್ಜ್ ಹೇಳಿದ್ದಾರೆ.
ಮಾತುಕತೆಗೆ ಹಿನ್ನಡೆ: ಇರಾನ್ನ ಪರಮಾಣು ತಾಣಗಳ ಮೇಲೆ ಇಸ್ರೇಲ್-ಅಮೆರಿಕ ನಡೆಸಿದ ದಾಳಿಗಳಿಂದ ಅಮೆರಿಕ ಜತೆಗಿನ ಮಾತುಕತೆ ಜಟಿಲವಾಗಿದೆ ಎಂದು ಗುರುವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ವಿ ಹೇಳಿದ್ದಾರೆ. ‘ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಮತ್ತೆ ಮಾತುಕತೆ ನಡೆಸುವ ಸಾಧ್ಯತೆ ಇದೆ, ಆದರೆ ಮಾತುಕತೆ ಪುನರಾರಂಭಕ್ಕೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ, ಭರವಸೆ ನೀಡಿಲ್ಲ’ ಎಂದಿದ್ದಾರೆ.