ಅಮರನಾಥ ಯಾತ್ರೆ ಮೇಲೆ ಖಲಿಸ್ತಾನ್ ಟಾರ್ಗೆಟ್

yathre
Published on

ನವದೆಹಲಿ: ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿಕೊಂಡು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್​ನ್ಯಾಷನಲ್ ಮತ್ತು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್​ಐ ಪಿತೂರಿ ನಡೆಸುತ್ತಿರುವುದನ್ನು ಬೇಹುಗಾರಿಕೆ ಸಂಸ್ಥೆಗಳು ಪತ್ತೆ ಹಚ್ಚಿವೆ.

ಪಂಜಾಬ್​ನ ಗ್ಯಾಂಗ್​ಸ್ಟರ್ ಜಾಲ, ಉಗ್ರಗಾಮಿ ಗುಂಪುಗಳು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಸಕ್ರಿಯಗೊಳಿಸುವುದು ಐಎಸ್​ಐ ಕಾರ್ಯತಂತ್ರದಲ್ಲಿ ಸೇರಿವೆ. ಅಮರನಾಥ ಯಾತ್ರೆಯ ವೇಳೆ ಅನಾಹುತಕಾರಿ ದಾಳಿಯನ್ನು ಸಂಘಟಿಸುವುದು ಐಎಸ್​ಐ ಉದ್ದೇಶವಾಗಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಬಿಜೆಪಿ ಹಾಗೂ ಹಿಂದು ಮುಖಂಡರನ್ನು ಟಾರ್ಗೆಟ್ ಮಾಡಲು ಬಬ್ಬರ್ ಖಾಲ್ಸಾವನ್ನು ಐಎಸ್​ಐ ಬಳಸಿಕೊಳ್ಳುವ ಸಾಧ್ಯತೆಯಿದೆಯೆಂಬ ಕಳವಳಕಾರಿ ಅಂಶವೂ ಬಹಿರಂಗವಾಗಿದೆ.

ಶಸ್ತ್ರಸಜ್ಜಿತ ಗುಂಪು: ಜೂನ್​ನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಿತವಾದ ಗುಂಪೊಂದು ಪಠಾಣ್​ಕೋಟ್ ಬಳಿಯ ಗ್ರಾಮವೊಂದರಲ್ಲಿ ಬೀಡುಬಿಟ್ಟಿತ್ತೆಂದು ಬೇಹುಗಾರಿಕೆ ಸಂಸ್ಥೆಗಳು ಎಚ್ಚರಿಸಿದ್ದವು. ತಕ್ಷಣವೇ ಪಠಾಣ್​ಕೋಟ್​ನಲ್ಲಿ ಕಾರ್ಯಾಚರಣೆ ನಡೆಸಿದಾಗ ಏಳು ಶಂಕಿತ ವ್ಯಕ್ತಿಗಳು ಇರುವುದು ಕಂಡು ಬಂದಿತ್ತು. ಅದೇ ಹೊತ್ತಿಗೆ, ಪಂಜಾಬ್​ನ ಹಿಂದು ಧಾರ್ವಿುಕ ಪ್ರವಚನಕಾರನೊಬ್ಬನಿಗೆ ಖಲಿಸ್ತಾನಿ ಬೆಂಬಲಿತ ಗುಂಪೊಂದು ಪತ್ರ ಬರೆದ ಕಳವಳಕಾರಿ ವಿದ್ಯಮಾನವೂ ನಡೆದಿತ್ತು. ಈ ಸಂಬಂಧ ಪಂಜಾಬ್ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ಅದರ ಹಿಂದಿರುವ ಶಕ್ತಿಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ.

4 ಲಕ್ಷ ಭಕ್ತರು: ಈ ವರ್ಷದ ಅಮರನಾಥ ಯಾತ್ರೆಯಲ್ಲಿ, ಕಳೆದ 28 ದಿನಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದಾರೆ.

ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ: ಜಮ್ಮು -ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಶನಿವಾರ ಭಯೋತ್ಪಾದಕ ರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಹುತಾತ್ಮನಾಗಿದ್ದು ಇನ್ನಿಬ್ಬರು ಗಾಯಗೊಂಡಿದ್ದಾರೆ. ಈ ಕಾಳಗದಲ್ಲಿ ಒಬ್ಬ ‘ಪಾಕಿಸ್ತಾನಿ ವ್ಯಕ್ತಿ’ ಕೂಡ ಹತನಾಗಿದ್ದಾನೆ ಎಂದು ಸೇನೆ ತಿಳಿಸಿದೆ. ಕಾರ್ಗಿಲ್ ವಿಜಯ ದಿವಸದಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ ಮರು ದಿನವೇ ಈ ಘಟನೆ ನಡೆದಿದೆ.

ಬಿಎಟಿ ದಾಳಿ?: ಇದು ಪಾಕಿಸ್ತಾನದ ಗಡಿ ಕಾರ್ಯ ತಂಡ (ಬಿಎಟಿ) ನಡೆಸಿರುವ ದಾಳಿಯಾಗಿರಬಹುದೆಂದು ಮೂಲಗಳು ಹೇಳಿವೆ. ಭಾರತ ಮತ್ತು ಪಾಕಿಸ್ತಾನದ ನಡುವೆ 2021ರ ಫೆಬ್ರವರಿಯಲ್ಲಿ ಸಹಿ ಹಾಕಲಾದ ಕದನ ವಿರಾಮಕ್ಕೂ ಮುನ್ನ ನಡೆದ ಹಲವು ಆಕ್ರಮಣಗಳಲ್ಲಿ ಬಿಎಟಿ ಒಳಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net