ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣೀಟ್ಟಿರುವ ಖಾಕಿ

Social Media
Published on


ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾಕಾರಿ ಸುದ್ದಿಗಳ ಮೇಲೆ ಹದ್ದಿನ ಕಣ್ಣು ಇಡಲು ಠಾಣಾ ಮಟ್ಟದಿಂದಲೇ ವಿಶೇಷ ತಂಡ ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಕೆಲವೊಂದು ಪೋಸ್ಟ್‌ಗಳೇ ಕಾರಣಭೂತವಾಗಿರುತ್ತವೆ ಎಂಬುದು ಕಂಡು ಬಂದಿದೆ ಎಂದರು.

ಕೆಲವೊಂದು ವಿರೋಧ, ಪ್ರಚೋದನಾಕಾರಿ ಹಾಗೂ ತಪ್ಪು ಮಾಹಿತಿ ಪೋಸ್ಟ್‌ಗಳಿರಬಹುದು. ಈ ರೀತಿಯ ಪೋಸ್ಟ್‌ಗಳಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿ ಅದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಈಗ ಬೆಂಗಳೂರು ನಗರದಲ್ಲಿ ಠಾಣಾ ಮಟ್ಟದಿಂದ ಆಯುಕ್ತರ ಕಚೇರಿವರೆಗೆ ಮೂರು ಹಂತದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಪ್ರತಿಯೊಂದು ಠಾಣೆಯಲ್ಲಿ ತಾಂತ್ರಿಕವಾಗಿ ಪರಿಣಿತಿ ಹೊಂದಿರುವ ಇಬ್ಬರು ಸಿಬ್ಬಂದಿ ಆಯ್ಕೆ ಮಾಡಿ ತಂಡ ರಚಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ಪ್ರಚೋದನಾಕಾರಿ ಹಾಗೂ ವಿರೋಧ ಪೋಸ್ಟ್‌ಗಳನ್ನು ಆ ಸಿಬ್ಬಂದಿ ಪತ್ತೆ ಹಚ್ಚಿ ಮಾಹಿತಿ ನೀಡಲಿದ್ದಾರೆ. ಇದೇ ರೀತಿ ಡಿಸಿಪಿ ಕಚೇರಿಯಲ್ಲಿ ಕೂಡಾ ಮತ್ತೊಂದು ಸಣ್ಣ ಮಟ್ಟದ ತಂಡ ಇದ್ದರೆ, ಆಯುಕ್ತರ ಕಚೇರಿಯಲ್ಲಿ ದೊಡ್ಡ ಮಟ್ಟದ ತಂಡ ಕಾರ್ಯನಿರ್ವಹಿಸಲಿವೆ ಎಂದು ವಿವರಿಸಿದರು.

ಸಿಬ್ಬಂದಿಗೆ ತರಬೇತಿ ನೀಡಲಾಗಿದೆ:
ಈ ಮೂರು ತಂಡಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನಕಣ್ಣೀಡಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ವೈರಲ್ ಆದರೆ ಕೂಡಲೇ ಅವುಗಳನ್ನು ಪರಿಶೀಲಿಸಲಾಗುತ್ತದೆ. ಫ್ಯಾಕ್ಟ್ ಚೆಕ್ ಮಾಡಿ ಸ್ಪಷ್ಟೀಕರಣ ನೀಡಲಾಗುತ್ತದೆ. ಈ ಮೂಲಕ ಸತ್ಯಾಸತ್ಯತೆ ಜನರಿಗೆ ಮನವರಿಕೆ ಮಾಡಿಕೊಡುತ್ತವೆ. ಈಗಾಗಲೇ ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಸುಳ್ಳು ಸುದ್ದಿಗಳನ್ನು ಯಾವ ರೀತಿ ಪತ್ತೆ ಹಚ್ಚಬೇಕು ಎಂಬುದನ್ನು ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಠಾಣಾ ಮಟ್ಟದ ತಂಡವು ಸುಳ್ಳು ಸುದ್ದಿ ಹಾಗೂ ಪ್ರಚೋದನಾಕಾರಿ ಬರಹಗಳ ಬಗ್ಗೆ ಡಿಸಿಪಿ ಕಚೇರಿಯ ತಂಡಕ್ಕೆ ಮಾಹಿತಿ ನೀಡಲಿವೆ. ಆ ತಂಡವು ಆಯುಕ್ತರ ಕಚೇರಿಯ ಘಟಕಕ್ಕೆ ವರದಿ ಮಾಡಲಿದೆ. ಆಯುಕ್ತರ ಕಚೇರಿಯಲ್ಲಿರುವ ಸಾಮಾಜಿಕ ಜಾಲತಾಣಗಳ ನಿಗಾ ಘಟಕದಲ್ಲಿ ನುರಿತ ಸೈಬರ್ ತಜ್ಞರ ಸಹ ಇರಲಿದ್ದು, ಇಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಸಹ ಒದಗಿಸಲಾಗಿದೆ. ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ. ನಕಲಿ ಖಾತೆಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶೇಷ ತಂಡ ರಚಿಸಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವ ಅಥವಾ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಸಾರ್ವಜನಿಕರಿಗೆ ಆಂತಕ ಉಂಟು ಮಾಡುವವರ ಮೇಲೆ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ.
-ಬಿ.ದಯಾನಂದ್, ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net