ಮಡೆನೂರು ಮನು ಕರೆದೊಯ್ದು ಸ್ಥಳ ಮಹಜರು ನಡೆಸಿದ ಖಾಕಿ

Madenur Manu
Published on

ಬೆಂಗಳೂರು: ಮದುವೆ ನೆಪದಲ್ಲಿ ಕಿರುತೆರೆ ಸಹಕಲಾವಿದೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತರಾಗಿರುವ ನಟ ಮಡೆನೂರು ಮನುನನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ಈ ಹಿಂದೆ ಸಂತ್ರಸ್ತೆ ವಾಸವಿದ್ದ ಬನಶಂಕರಿ ೩ ನೇ ಹಂತದ ಕಾಮಾಕ್ಯ ಬಳಿಯ ನಿವಾಸ, ಪ್ರಸ್ತುತ ವಾಸವಿರುವ ನಾಗರಬಾವಿ ನಿವಾಸ ಮತ್ತು ಕಾರ್ಯಕ್ರಮವೊಂದಕ್ಕೆ ಹೋದಾಗ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾದ ಶಿವಮೊಗ್ಗದ ಶಿಕಾರಿಪುರದ ಹೋಟೆಲ್‌ಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮೂರು ಸ್ಥಳಗಳಲ್ಲಿ ಆರೋಪಿ ಮನು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿ ಆರೋಪಿಯಿಂದ ಹಲವು ಮಾಹಿತಿಯನ್ನು ಕಲೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಸಂತ್ರಸ್ತೆಯನ್ನು ಪ್ರತ್ಯೇಕವಾಗಿ ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದೆ ಎಂದು ತಿಳಿದು ಬಂಂದಿದೆ.

ನಟರಿಗೆ ಹಿಯಾಳಿಸಿರುವ ಆಡಿಯೋ ವೈರಲ್:

ಈ ಮಧ್ಯೆ ಮಡೆನೂರು ಮನು ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಆ ಆಡಿಯೋದಲ್ಲಿ ಕನ್ನಡದ ನಟರಿಗೆ ಹಿಯಾಳಿಸಲಾಗಿದೆ. ಈ ಆಡಿಯೋವನ್ನು ಸಂತ್ರಸ್ತೆಯ ಇನ್‌ಸ್ಟಾಗ್ರಾಂನಿಂದ ಪೋಸ್ಟ್ ಮಾಡಲಾಗಿದೆ. ಆಡಿಯೋದಲ್ಲಿ ನಟರಾದ ಶಿವರಾಜ್ ಕುಮಾರ್, ಧೃವಸರ್ಜಾ, ದರ್ಶನ್ ಅವರನ್ನು ಹಿಯಾಳಿಸಿ ಮಾತನಾಡಲಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net