ಸಂಪಾದಕೀಯ: ಖಡಕ್ ಸಂದೇಶ

-685ed14645822
Published on

ಚೀನಾದ ಕ್ಸಿಂಗ್​ಡಾವೋದಲ್ಲಿ ನಡೆದ ಶಾಂಘೖ ಸಹಕಾರ ಸಂಸ್ಥೆಯ (ಎಸ್​ಸಿಒ) ರಕ್ಷಣಾ ಸಚಿವರ ಸಭೆಯಲ್ಲಿ ಭಾರತವು ಭಯೋತ್ಪಾದನೆ ವಿಷಯದಲ್ಲಿ ಖಡಕ್ ನಿಲುವನ್ನು ಪ್ರತಿಪಾದಿಸುವ ಮೂಲಕ ಚೀನಾ, ಪಾಕಿಸ್ತಾನ ಸೇರಿದಂತೆ ಜಾಗತಿಕ ದೇಶಗಳಿಗೆ ಸಂದೇಶ ರವಾನಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ಲ್ಲಿ 26 ಮುಗ್ಧ ಪ್ರವಾಸಿಗರ ಹತ್ಯೆಗೆ ಕಾರಣವಾದ ಭಯೋತ್ಪಾದನೆಯನ್ನು ಪ್ರಸ್ತಾಪಿಸದ ಹಾಗೂ ಭಯೋತ್ಪಾದನೆ ಕುರಿತು ಭಾರತದ ನಿಲುವನ್ನು ಪ್ರತಿಬಿಂಬಿಸದ ಜಂಟಿ ಹೇಳಿಕೆಗೆ ಸಹಿ ಹಾಕಲು ಈ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ನಿರಾಕರಿಸಿದರು. ಪಹಲ್ಗಾಮ್ ಬಗ್ಗೆ ಯಾವುದೇ ಪ್ರಸ್ತಾಪ ಮಾಡದ ಜಂಟಿ ಹೇಳಿಕೆ, ಬಲೂಚಿಸ್ತಾನದಲ್ಲಿನ ಅಶಾಂತಿಗೆ ಭಾರತ ಕಾರಣವೆಂದು ಪರೋಕ್ಷವಾಗಿ ಆರೋಪಿಸಿರುವ ಅಂಶ ಭಾರತವನ್ನು ಕೆರಳಿಸಿದೆ.

ಚೀನಾ ಎಸ್​ಸಿಒ ಕೂಟದ ಪ್ರಸಕ್ತ ಅಧ್ಯಕ್ಷ ದೇಶವಾಗಿದ್ದು, ತನ್ನ ಮಿತ್ರದೇಶ ಪಾಕಿಸ್ತಾನವನ್ನು ಮುಜುಗರದಿಂದ ಪಾರುಮಾಡಲು ಅವೆರಡೂ ದೇಶಗಳು ಸೇರಿ ತಂತ್ರ ರೂಪಿಸಿದಂತಿದೆ. ‘ಜಂಟಿ ಹೇಳಿಕೆಯ ದಾಖಲೆಪತ್ರದ ಭಾಷೆ ಭಾರತಕ್ಕೆ ತೃಪ್ತಿ ತಂದಿಲ್ಲ. ಹಾಗಾಗಿ ಜಂಟಿ ಘೊಷಣೆ ಹಾಗೂ ಜಂಟಿ ಹೇಳಿಕೆಗೆ ಭಾರತ ಅಂಕಿತ ಹಾಕಿಲ್ಲ’ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಭಾರತದ ಈ ನಿಲುವು ಚೀನಾ, ಪಾಕ್ ಮುಂತಾದ ದೇಶಗಳಿಗೆ ತಪರಾಕಿ ನೀಡಿದೆಯಲ್ಲದೆ, ಭಯೋತ್ಪಾದನೆಯನ್ನು ಸಹಿಸುವ ಮಾತೇ ಇಲ್ಲ ಎಂಬ ಸಂದೇಶವನ್ನು ಕೂಡ ಪರಿಣಾಮಕಾರಿಯಾಗಿ ರವಾನಿಸಿದೆ.

ಭಾರತವು ಬಲೂಚಿಸ್ತಾನ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದೆ. ಆದರೆ ಭಾರತ ಈ ಆರೋಪವನ್ನು ನಿರಾಕರಿಸುತ್ತಿದೆ. ಬೆಲಾರುಸ್, ಚೀನಾ, ಭಾರತ, ಇರಾನ್, ಕಜಕಿಸ್ತಾನ್, ರ್ಕಿಗಿಜ್​ಸ್ತಾನ್, ಪಾಕಿಸ್ತಾನ, ರಷ್ಯಾ, ತಾಜಿಕಿಸ್ತಾನ್ ಮತ್ತು ಉಜ್ಬೆಕಿಸ್ತಾನ್ ಎಸ್​ಸಿಒ ಕೂಟದ 10 ಸದಸ್ಯ ದೇಶಗಳಾಗಿವೆ. ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆ ವಿಚಾರಗಳನ್ನು ರ್ಚಚಿಸಲು ಎರಡು ದಿನಗಳ ಕಾಲ ಈ ಸಭೆ ನಡೆಯಿತು.

ಪಹಲ್ಗಾಮ್ ದಾಳಿಯಂತಹ ಹೇಯಕೃತ್ಯವನ್ನು ಖಂಡಿಸಲು ಶಾಂಘೖ ಸಹಕಾರ ಸಂಸ್ಥೆಯ ಸಭೆ ಹಿಂದೇಟು ಹಾಕಿದ್ದು ಖಂಡನೀಯ. ಇದರಲ್ಲಿ ಚೀನಾ ಹಾಗೂ ಪಾಕ್ ಪಾತ್ರ ಮುಖ್ಯ ಎಂಬುದು ನಿಜವಾದರೂ, ಉಳಿದ ದೇಶಗಳ ಸಚಿವರು ಭಾರತದ ನಿಲುವನ್ನು ಬೆಂಬಲಿಸಬಹುದಿತ್ತು. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ತನ್ನ ಮೇಲೆ ಭಾರತ ನಡೆಸಿದ ದಾಳಿ ವೇಳೆ ಪಾಕಿಸ್ತಾನವು ಚೀನಾ ಪೂರೈಸಿದ ವಾಯುರಕ್ಷಣಾ ವ್ಯವಸ್ಥೆಯನ್ನು ಬಳಸಿತ್ತು.

ಆದರೆ ಭಾರತದ ಹೊಡೆತಕ್ಕೆ ಆ ವ್ಯವಸ್ಥೆ ನಿಲ್ಲಲಿಲ್ಲ. ಇದು ಪಾಕ್ ಜೊತೆಗೆ ಚೀನಾಕ್ಕೂ ಮುಜುಗರದ ಸಂಗತಿಯಾಗಿತ್ತು. ಭಾರತ ಮತ್ತು ಚೀನಾ ನಡುವೆ ಭಾರಿ ಪ್ರಮಾಣದ ವ್ಯಾಪಾರವಹಿವಾಟು ನಡೆಯುತ್ತಿದ್ದರೂ, ಗಡಿ ವಿಷಯ ಹಾಗೂ ಪಾಕ್ ವಿಚಾರ ಬಂದಾಗ ಚೀನಾ ನಡೆ ದ್ವಂದ್ವದಿಂದ ಕೂಡಿರುತ್ತದೆ. ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಭಾರತದ ಕಾರ್ಯತಂತ್ರ ರೂಪುಗೊಳ್ಳಬೇಕಾದುದು ಅನಿವಾರ್ಯ. ಎಸ್​ಸಿಒ ಸಭೆಯಲ್ಲಿ ಭಾರತದ ನಿಲುವನ್ನು ವಿದೇಶಾಂಗ ಸಚಿವ ಜೈಶಂಕರ್ ಸಮರ್ಥಿಸಿಕೊಂಡಿರುವುದು ಸರಿಯಾಗಿಯೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net