

ಬೆಂಗಳೂರು: ಅಕ್ಕಿ ವಿಚಾರ ಕುರಿತು ನಾಳೆ ನವದೆಹಲಿಗೆ(New Delhi) ಭೇಟಿ ನೀಡಿ ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದೇನೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ. ಎಚ್. ಮುನಿಯಪ್ಪ(KH Muniyappa) ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವ ಕೆ. ಎಚ್. ಮುನಿಯಪ್ಪ, ಒಡಿಶಾ, ಚತ್ತೀಸಗಢ, ಆಂಧ್ರ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳಿಂದ ಅಕ್ಕಿ ಖರೀದಿಯ ಪ್ರಯತ್ನ ನಡೆಯುತ್ತಿದೆ. ಗ್ಯಾರಂಟಿ ಪ್ರಕಾರ ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಈ ಹಿಂದೆ ಮಾತು ಕೊಟ್ಟಿದ್ದೇವೆ. ಎಫ್ಸಿಐ ಅಕ್ಕಿ ಕೊಡುತ್ತೇವೆ ಎಂದು ಜೂ.12ಕ್ಕೆ ಹೇಳಿದ್ದರು. ಆದ್ರೆ ಜೂ.13 ಕ್ಕೆ ಕೊಡಲ್ಲ ಅಂತ ಹೇಳಿದ್ದಾರೆ. ಈ ಹಿನ್ನೆಲೆ ಸಿಎಂ ನಿರ್ದೇಶನದ ಮೇರೆಗೆ ನಾಳೆ ನಾನು ದೆಹಲಿಗೆ ತೆರಳುತ್ತೇನೆ ಎಂದು ಹೇಳಿದರು.
ಕೇಂದ್ರ ಆಹಾರ ಸರಬರಾಜು ಸಚಿವರನ್ನು ಭೇಟಿಯಾಗುವ ಮೂಲಕ ಅಕ್ಕಿ ಖರೀದಿಯ ಪ್ರಯತ್ನ ಮಾಡುತ್ತೇವೆ. ಎಫ್ಸಿಐ ಬಳಿ 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ಅದರಲ್ಲಿ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನಮ್ಮ ರಾಜ್ಯಕ್ಕೆ ಅಗತ್ಯವಿದೆ. ಕೇಂದ್ರ ಸರ್ಕಾರದ ಜೊತೆ ಅಕ್ಕಿ ಖರೀದಿಯ ಪ್ರಯತ್ನದ ಜೊತೆಗೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೂ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದರು.
ಈ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಬಹುದು. ಕೇಂದ್ರೀಯ ಬಂಡಾರ, ನಾಫೆಡ್, ಎನ್ಸಿಸಿಎಫ್ನಿಂದ ಅಕ್ಕಿ ಖರೀದಿ ಮಾಡಬೇಕಾಗಿದೆ. ಕಾನೂನು ಮತ್ತು ಟೆಂಡರ್ ಪ್ರಕ್ರಿಯೆಗಳಿಂದ ಇದು ಸ್ವಲ್ಪ ವಿಳಂಬವಾಗಲಿದೆ. ಹಿಂದೆ ಇದೇ ಸಂಸ್ಥೆಗಳು ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡುತ್ತಿದ್ದವು, ಈ ಸಂಸ್ಥೆಗಳಿಗೆ ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಹೇಳಲಾಗಿದೆ. ಕೇಂದ್ರೀಯ ಸಂಸ್ಥೆಗಳಿಂದ ಅಕ್ಕಿ ಖರೀದಿ ಮಾಡುತ್ತೇವೆ. ಇದರಿಂದ ನಮಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ತಡವಾದರೂ ಅಕ್ಕಿಯನ್ನು ಖಂಡಿತ ಕೊಡುತ್ತೇವೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದರು.