

ವರಮಹಾಲಕ್ಷ್ಮೀ ಹಬ್ಬದ ಸಡಗರದಲ್ಲಿರುವ ಚಂದನವನಕ್ಕೆ ಈಗ ಡಬಲ್ ಧಮಾಕಾ ಖುಷಿ ಸಿಕ್ಕಿದೆ. ದೆಹಲಿಯಲ್ಲಿ ಶುಕ್ರವಾರ(ಆಗಸ್ಟ್ 16) ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಘೋಷಣೆಯಾಗಿದೆ. ಈ ಪಟ್ಟಿಯಲ್ಲಿ ಕನ್ನಡದ ದುಬಾರಿ ಬಜೆಟ್ ಸಿನಿಮಾ ಎಂಬ ಖ್ಯಾತಿಗೆ ಪಡೆದಿರುವ ಕೆಜಿಎಫ್-2 ಎರಡು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವ ಕೆಜಿಎಫ್- 2 ಸಿನಿಮಾ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಹಾಗೂ ಅತ್ಯುತ್ತಮ ಸಾಹಸ ನಿರ್ದೇಶನ(ಸ್ಟಂಟ್ ಕೋರಿಯೊಗ್ರಫಿ) ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. 2022 ಏಪ್ರಿಲ್ 14ರಂದು ಬಿಡುಗಡೆಯಾದ ಈ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು. ಕೆಜಿಎಫ್-2 ಅಂದಾಜ 1200 ಕೋಟಿ ರೂಪಾಯಿ ಗಳಿಸಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.
ಕೆಜಿಎಫ್-2 ಸಿನಿಮಾದಲ್ಲಿ ಯಶ್ ಸೇರಿದಂತೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ಟಿ.ಎಸ್.ನಾಗಾಭರಣ ಮತ್ತು ಮಾಳವಿಕಾ ಅವಿನಾಶ್ ಬಹುತಾರಾಗಣವಿತ್ತು. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕೆಜಿಎಫ್-2 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. 2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗಿನ ಸೆನ್ಸಾರ್ ಆಗಿರುವ ಸಿನಿಮಾಗಳನ್ನು ಈ ಅವಾರ್ಡ್ಗೆ ಪರಿಗಣಿಸಲಾಗಿದೆ.