

ಕೋಲಾರ: ಜಿಲ್ಲಾಡಳಿತ ಕಚೇರಿ ಮುಂಭಾಗ ಕೆಜಿಎಫ್ ಶಾಸಕಿ ರೂಪಾ ಶಶಿಧರ ಅವರು ಏಕಾಂಗಿಯಾಗಿ ಹೋರಾಟ ನಡೆಸಿದರು.
ಶನಿವಾರ ಬೆಳಗ್ಗೆ ಡಿಸಿ ಕಚೇರಿ ಮುಂದೆ ಬ್ಯಾನರ್ ಹಿಡಿದು ನಿಂತ ಶಾಸಕಿ, ಜಿಲ್ಲಾಧಿಕಾರಿ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿರಿ ಪಕ್ಷಾಂತರ ಗುಮ್ಮ ಮತ್ತೆ ಬಂತು! ಜೆಡಿಎಸ್ ತೊರೆದು ‘ಕೈ’ ಹಿಡಿಯಲು ಕ್ಷಣಗಣನೆ
ಅಷ್ಟಕ್ಕೂ ಶಾಸಕಿ ರೂಪಾ ಅವರು ಧರಣಿ ನಡೆಸಿದ್ದು ಯಾಕೆ ಗೊತ್ತಾ? ತಮ್ಮ ಕ್ಷೇತ್ರದ ರಸ್ತೆ ಕಾಮಗಾರಿ ವಿಷಯಕ್ಕೆ. ಕೆಜಿಎಫ್ನ ಅಶೋಕ ರಸ್ತೆ ಅಗಲೀಕರಣ ಕಾಮಗಾರಿಗೆ ಅನುಮೋದನೆ ಸಿಕ್ಕರೂ ಕಾಮಗಾರಿ ಆರಂಭ ಆಗಿಲ್ಲ. ಇದರಿಂದ ಬೇಸತ್ತ ಶಾಸಕಿ ಪ್ರತಿಭಟನೆ ನಡೆಸಿದರು.
'ರಸ್ತೆ ಅಗಲೀಕರಣಕ್ಕೆ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಜನತೆ ರಸ್ತೆ ಅಗಲೀಕರಣಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ರಸ್ತೆ ಅಭಿವೃದ್ಧಿ ಆಗದ ಪರಿಣಾಮ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ರಸ್ತೆ ಕಾಮಗಾರಿ ನಡೆಸುವವರೆಗೂ ಮೌನ ಪ್ರತಿಭಟನೆ ಮುಂದುವರಿಯಲಿದೆ' ಎಂದು ಶಾಸಕಿ ಎಚ್ಚರಿಕೆ ನೀಡಿದರು. ಅಲ್ಲದೆ ಸೋಮವಾರ ಶುರುವಾಗುವ ವಿಧಾನಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಮಧ್ಯಾಹ್ನ 1 ಗಂಟೆಯಾದರೂ ಏಕಾಂಗಿಯಾಗಿ ಶಾಸಕಿ ಹೋರಾಟ ನಡೆಸುತ್ತಿದ್ದರು. ಪೊಲೀಸರು ಮನವೊಲಿಸಿದರೂ ಪ್ರತಿಭಟನೆ ಹಿಂಪಡೆದಿರಲಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.