ಓಂಶಕ್ತಿ, ಶಬರಿಮಲೆಗೆ ಪ್ರವಾಸ ಭಾಗ್ಯ! ಆಕಾಂಕ್ಷಿಗಳಿಂದ ವ್ಯವಸ್ಥೆ ಚುನಾವಣೆ ವರ್ಷದಲ್ಲಿ ಅಭ್ಯರ್ಥಿಗಳ ಹಿಂದೆ ಬಿದ್ದ ಭಕ್ತರು

ಕೆಜಿಎಫ್​ನಲ್ಲಿ ಶಾಸಕಿ ರೂಪಕಲಾ ಶಬರಿಮಲೆ ಪ್ರವಾಸಕ್ಕೆ ಬಸ್​ ವ್ಯವಸ್ಥೆ ಮಾಡಿರುವುದು.
ಕೆಜಿಎಫ್​ನಲ್ಲಿ ಶಾಸಕಿ ರೂಪಕಲಾ ಶಬರಿಮಲೆ ಪ್ರವಾಸಕ್ಕೆ ಬಸ್​ ವ್ಯವಸ್ಥೆ ಮಾಡಿರುವುದು.
Published on

ಕೋಲಾರ: ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಉಡುಗೊರೆಗಳ ಜತೆಗೆ ಮೇಲ್​ಮರವತ್ತೂರ್​, ಶಬರಿಮಲೆಗೆ ತೆರಳುವ ಭಕ್ತರಿಗೆ ವಿವಿಧ ಪಕ್ಷಗಳ ಟಿಕೆಟ್​ ಆಕಾಂಕ್ಷಿಗಳಿಂದ ಪ್ರವಾಸ ಭಾಗ್ಯ ಲಭಿಸುತ್ತಿದೆ. ಖರ್ಚಿಲ್ಲದೆ ದೇವರ ದರ್ಶನ ಪಡೆದುಕೊಳ್ಳಲು ಭಕ್ತರು ಭಾವಿ ಪ್ರಜಾಪ್ರತಿನಿಧಿಗಳಿಗೆ ಗಂಟು ಬೀಳುತ್ತಿದ್ದಾರೆ. ಮತಗಳು ಕೈಜಾರುತ್ತವೆ ಎಂಬ ಭೀತಿಯಿಂದ ಪ್ರಜೆಗಳ ಕೋರಿಕೆಗಳನ್ನು ಪೂರೈಸಲು ನಾಯಕರಾಗುವವರು ಲಕ್ಷಾಂತರ ರೂ.ಹಣ ಖರ್ಚು ಮಾಡುತ್ತಿದ್ದಾರೆ.

ಚಳಿಗೆ ನಡುಗುವವರಿಗೆ ಸ್ವೆಟರ್​, ತಾಯಂದಿರಿಗೆ ಸೀರೆ, ಪುಣ್ಯಕ್ಷೇತ್ರಗಳಿಗೆ ಪ್ರವಾಸಕ್ಕೆ ವ್ಯವಸ್ಥೆ ಮಾಡುವ ಕೆಲಸ ಈಗ ಜಿಲ್ಲೆಯೆಲ್ಲೆಡೆ ಭರದಿಂದ ನಡೆಯುತ್ತಿದೆ. ಮುಖಂಡರು ಸಾಲ ಮಾಡಿ ಅಥವಾ ಸಂಪಾದನೆ ಮಾಡಿದ ಹಣದಲ್ಲಿ ಇಂತಹ ಸೇವೆ ಮಾಡದಿದ್ದರೆ "ಹಣಬಿಚ್ಚಲ್ಲ'ವೆಂದು ಜನರು ಅಂತಹ ನಾಯಕರ ಸಭೆ, ಸಮಾರಂಭಗಳಿಂದ ದೂರವಾಗಿಬಿಡುತ್ತಾರೆ. ಜನರ ನಾಡಿಮಿಡಿತ ಅರಿತಿರುವ ಆಕಾಂಕ್ಷಿಗಳು ಚುನಾವಣೆೆ ವರ್ಷ ಇದಾಗಿರುವುದರಿಂದ ಧಾರಾಳತನ ಮೆರೆಯುತ್ತಿದ್ದಾರೆ.


ಉಚಿತ ಸೇವೆ ಮೂಲಪುರುಷ ಮಾಲೂರು ಕೃಷ್ಣಯ್ಯಶೆಟ್ಟಿ ಎಂದರೆ ತಪ್ಪಾಗಲಾರದು. ಶೆಟ್ಟರ ಪುಣ್ಯಕ್ಷೇತ್ರಗಳ ಪ್ರವಾಸ, ಚಿತ್ರಾನ್ನ, ಓಟಿಗೆ ನೋಟು ಕೊಟ್ಟಿದ್ದು ಸೇರಿ ಹತ್ತು ಹಲವು ಉಚಿತ ಸೇವೆಗಳಿಂದಾಗಿ ಆಗ ಅಭಿವೃದ್ಧಿಗೆ ಆದ್ಯತೆ ನೀಡಿದ್ದ ಎ. ನಾಗರಾಜುರನ್ನು ಮತದಾರ ಮಕಾಡೆ ಮಲಗಿಸಿದ್ದು ಇತಿಹಾಸ.

ಅದೇ ತಂತ್ರಗಾರಿಕೆಯನ್ನು ಈಗಿನ ರಾಜಕಾರಣಿಗಳು ಮಾಡುತ್ತಿದ್ದಾರೆ. ಆಗ ಓಟಿಗೆ 100 ರೂ.ನೋಟು ಇದ್ದಿದ್ದು ಈಗ 2 ಸಾವಿರ ರೂ.ಗೆ ಏರಿಕೆಯಾಗಿರುವುದು ಬಿಟ್ಟರೆ ವ್ಯತ್ಯಾಸವೇನಿಲ್ಲ. ಸಭೆ, ಸಮಾರಂಭಕ್ಕೆ ಬರುವವರಿಗೆ ತಿಂಡಿ, ಊಟ ಮತ್ತು ಕೈಗೆ 500 ರೂ. ನೀಡುವುದರ ಜತೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಇತ್ತೀಚೆಗೆ ಅಭ್ಯರ್ಥಿಯೊಬ್ಬರು ಸಮಾರಂಭಕ್ಕೆ 1 ಕೋಟಿ ರೂ.ಗೂ ಹೆಚ್ಚು ವೆಚ್ಚಮಾಡಿದ್ದರೆಂಬುದು ಗುಟ್ಟಾಗೇನೂ ಉಳಿದಿಲ್ಲ.


ವಿಧಾನಸಭೆ ಟಿಕೆಟ್​ ಕೇಳಬೇಕೆಂದರೆ ಕನಿಷ್ಠ ಕೈಯ್ಯಲ್ಲಿ 50 ರಿಂದ 100 ಕೋಟಿ ರೂಪಾಯಿ ಇರಬೇಕು ಎಂದು ಸಾರ್ವಜನಿಕರು ಚರ್ಚಿಸುತ್ತಿದ್ದಾರೆ. ಈ ಮಾತು ಸತ್ಯವೆಂಬಂತೆ ಆಕಾಂಕ್ಷಿಗಳು ಈಗಲೇ ಉಚಿತ ಉಡುಗೊರೆ ಹಂಚಿಕೆಗೆ ಮುಂದಾಗಿದ್ದಾರೆ. ಬಂಗಾರಪೇಟೆಯಲ್ಲಿ ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಸಾವಿರಾರು "ಸ್ವೆಟರ್​'ಗಳನ್ನು ವಿತರಿಸಿದ್ದಾರೆ. ಬಹುತೇಕ ಅಭ್ಯರ್ಥಿಗಳು ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದು ಹತ್ತು ಹಲವು ಕಾರ್ಯಗಳಿಗೆ ನೆರವು ನೀಡುತ್ತ ಬರುತ್ತಿದ್ದಾರೆ.


ಮೇಲ್​ಮರವತ್ತೂರ್​ ಟ್ರಿಪ್​
: ಕೋಲಾರ, ಕೆಜಿಎಫ್​, ಮುಳಬಾಗಿಲು, ಮಾಲೂರು ಮತ್ತಿತರ ಕಡೆ ಮಾಲೆಧಾರಿಣಿ ಓಂಶಕ್ತಿ ಭಕ್ತರನ್ನು ನೂರಾರು ಬಸ್​ಗಳಲ್ಲಿ ಮೇಲ್​ಮರವತ್ತೂರ್​ಗೆ ಕರೆದೊಯ್ಯಲು ಆಕಾಂಕ್ಷಿಗಳು ಪೈಪೋಟಿಗೆ ಇಳಿದಿದ್ದಾರೆ. ಕೋಲಾರದಲ್ಲಿ ಬಿಜೆಪಿಯ ಓಂಶಕ್ತಿ ಚಲಪತಿ ಡಿ.23ರಿಂದ ಎಷ್ಟೇ ಭಕ್ತರು ಬಂದರೂ ಮೇಲ್​ಮರವತ್ತೂರ್​ಗೆ ಬಸ್​, ಊಟದ ವ್ಯವಸ್ಥೆ ಮಾಡುವುದಾಗಿ ಘೋಷಿಸಿದ್ದಾರೆ.

ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​ ಸಹ ಓಂಶಕ್ತಿ ಪ್ರವಾಸಕ್ಕೆ ಚಲ್ದಿಗಾನಹಳ್ಳಿ ಭಕ್ತರಿಗೆ 25 ಸಾವಿರ ರೂ.ನೆರವು ಒದಗಿಸಿದ್ದಾರೆ. ಇನ್ನು ಕೆಜಿಎಫ್​ನಲ್ಲಿ ಶಾಸಕಿ ರೂಪಕಲಾ ಸಹ ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಪ್ರವಾಸಕ್ಕೆ ಬಸ್​, ಊಟದ ವ್ಯವಸ್ಥೆ ಮಾಡಿದ್ದು, 8 ಬಸ್​ನಲ್ಲಿ ಭಕ್ತರು ತೆರಳಿದ್ದಾರೆ. ಓಂಶಕ್ತಿ ಭಕ್ತರಿಗೂ ಅವರು ಪ್ರವಾಸ ವ್ಯವಸ್ಥೆ ಮಾಡುವ ಸಾದ್ಯತೆ ಇದೆ.

ಶಬರಿಮಲೆ ಯಾತ್ರೆಗೂ ಸಿದ್ಧ: ಮಹಿಳೆಯರು ಹೆಚ್ಚಿಗೆ ಓಂಶಕ್ತಿ ದೇವಾಲಯಕ್ಕೆ ತೆರಳಿದರೆ, ಪುರುಷರು ಶಬರಿಮಲೆಗೆ ತೆರಳುತ್ತಾರೆ. ಅಯ್ಯಪ್ಪ ಭಕ್ತರು ಡಿಸೆಂಬರ್​, ಜನವರಿಯಲ್ಲಿ ತೆರಳುವುದರಿಂದ ಭಕ್ತರ ಪ್ರವಾಸಕ್ಕೆ ಹಲವು ಆಕಾಂಕ್ಷಿಗಳು ಸಹಕರಿಸುವ ಸಾಧ್ಯತೆ ಇದೆ. ಜನರು ನಾಯಕರ ಬಳಿ ಬಂದು ಇಂತಹ ಡಿಮ್ಯಾಂಡ್​ ಇಡುತ್ತಿದ್ದಾರೆ. ಚುನಾವಣೆ ವರ್ಷ ಇದಾಗಿರುವುದರಿಂದ ಅನಿವಾರ್ಯವಾಗಿ ಮುಖಂಡರು ಸಹ ಇಲ್ಲ ಎನ್ನದೆ ನೆರವು ನೀಡುತ್ತಿದ್ದಾರೆ.

ಈಗ ಕೊಟ್ಟರೇನು ಪ್ರಯೋಜನ?: ಹಲವು ಶಾಸಕ, ಟಿಕೆಟ್​ ಆಕಾಂಕ್ಷಿಗಳು ಚುನಾವಣೆ ಇನ್ನೂ ದೂರವಿದೆ. ಈಗಲೇ ಉಚಿತ ಸೇವೆ ಮಾಡಿದರೆ ಮತದಾರ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಟಿಕೆಟ್​ ಸಹ ಯಾರ ಪಾಲಾಗುತ್ತದೋ? ನಾವು ಮತದಾರರ ಮೇಲೆ ಹೂಡಿಕೆ ಮಾಡುವ ಹಣ ವಾಪಸ್​ ಬರುವುದಿಲ್ಲ. ಈಗ ಮಾಡುವುದೆಲ್ಲ ವ್ಯರ್ಥ. ಆದರೆ ಚುನಾವಣೆ ಕಾವು ಏರಿದಾಗ ಅಥವಾ ಒಂದು ವಾರ ಇದ್ದಂತೆ ಕೊಡುವ ಉಡುಗೊರೆ ಅಥವಾ ನೋಟಿನ ಮೇಲೆ ಮತದಾರ ವಾಲುತ್ತಾನೆ. ಹೀಗಾಗಿ ಈಗಿನಿಂದಲೇ ಹಣ ಚೆಲ್ಲುವುದು ಬೇಡ ಎಂದು ನಿರ್ಧರಿಸಿ "ಉಚಿತ ಸೇವಾಕಾರ್ಯ'ಗಳಿಂದ ದೂರವಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net