ಬೇರು ವಿಸ್ತರಿಸಿಕೊಂಡಿತೇ ಕೆಎಫ್​ಡಿ?: ಶಿವಮೊಗ್ಗ, ಉ.ಕನ್ನಡದಲ್ಲಿ 4 ಕೇಸ್ ಪತ್ತೆ- ಮೈಸೂರು ಜಿಲ್ಲೆಗೂ ಆತಂಕ

kfd april
Published on

ಶಿವಮೊಗ್ಗ: ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೋಮವಾರ ಒಟ್ಟು ನಾಲ್ಕು ಕೆಎಫ್​ಡಿ (ಮಂಗನ ಕಾಯಿಲೆ) ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಸೋಂಕು ಮೈಸೂರು ಜಿಲ್ಲೆಗೂ ಹರಡುವ ಆತಂಕ ಎದುರಾಗಿದೆ. ಮೈಸೂರು ತಾಲೂಕಿನ ಹಡಜನ ಗ್ರಾಮದಲ್ಲಿ ಮಂಗಗಳು ಸಾವನ್ನಪ್ಪಿರುವುದು ಆರೋಗ್ಯ ಇಲಾಖೆಗೆ ಆತಂಕ ಮೂಡಿಸಿದೆ. 2013ರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಕೆಎಫ್​ಡಿ ವೈರಾಣು ಕಾಣಿಸಿಕೊಂಡಿತ್ತು. ಹಡಜನದಲ್ಲಿ ಸಾವನ್ನಪ್ಪಿದ ಮಂಗಗಳ ದೇಹದ ಮಾದರಿಯನ್ನು ಶಿವಮೊಗ್ಗದ ವಿಆರ್​ಡಿಎಲ್​ಗೆ ಪರೀಕ್ಷೆಗೆ ಕಳಿಸಲಾಗಿದೆ. ಒಂದೆರಡು ದಿನಗಳಲ್ಲಿ ವರದಿ ಕೈಸೇರಲಿದೆ.

ಈ ವರ್ಷ ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಎಫ್​ಡಿ ವೈರಸ್ ಪತ್ತೆಯಾಗಿದೆ. ಈವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಐವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಅಸುನೀಗಿದ್ದು, ಸೋಂಕಿತರ ಸಂಖ್ಯೆ 217ಕ್ಕೆ ತಲುಪಿದೆ.

ನಡೆದಿದೆ ಸಂಶೋಧನೆ

ಕೆಎಫ್​ಡಿ ಬಗ್ಗೆ ಈವರೆಗೆ ಸಂಶೋಧನೆಗಳೇ ನಡೆದಿರಲಿಲ್ಲ. ಕೇವಲ ರೋಗನಿರೋಧಕ ಲಸಿಕೆಯಷ್ಟೇ ಪರಿಹಾರವಾಗಿತ್ತು. ಇದೀಗ ಸಂಶೋಧನೆಗೆ ಐಐಎಸ್ಸಿ ಜತೆಗೆ ಬ್ರಿಟನ್ ಸರ್ಕಾರದ ಅಂಗಸಂಸ್ಥೆ ಮುಂದೆ ಬಂದಿವೆ.

ಮತ್ತೆ 4 ಪ್ರಕರಣ ಬೆಳಕಿಗೆ

ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ತಲಾ ಒಬ್ಬರು, ಜೊಯಿಡಾ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ಇದರೊಂದಿಗೆ ಕೆಎಫ್​ಡಿ ಸೋಂಕಿತರ ಸಂಖ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ 160, ಉತ್ತರ ಕನ್ನಡದಲ್ಲಿ 11ಕ್ಕೆ ಏರಿಕೆಯಾಗಿದೆ.

ಮಂಗಗಳೇ ಮೊದಲ ಬಲಿ

ಮಂಗಗಳು ಈ ವೈರಾಣುವಿನಿಂದ ಮೊದಲು ಸಾವನ್ನಪ್ಪುತ್ತವೆ. ಬಳಿಕ ವೈರಾಣುಗಳು ಮೃತ ಮಂಗನ ದೇಹದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿ ಸಸ್ತನಿಗಳ ಮೂಲಕ ಮನುಷ್ಯನ ದೇಹಕ್ಕೆ ಬರುತ್ತವೆ. ಚಿಕ್ಕ ಮಕ್ಕಳು, ವಯೋವೃದ್ಧರು ಈ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net