ಸಾಮಾನ್ಯವರು ಅಸಾಮಾನ್ಯ ಎತ್ತರಕ್ಕೆ ಏರಿರುವ ಹಲವು ಉದಾಹರಣೆಗಳಿವೆ. ಆದರೆ, ಒಬ್ಬ ಸಾಮಾನ್ಯ ಲಾಯರ್ ಒಂದು ರಾಜ್ಯ ಮುಖ್ಯಮಂತ್ರಿಯಾಗುವ ಕಥೆ "ಕಾಮನ್ ಮ್ಯಾನ್'. ಎನ್. ನರಸಿಂಹಮೂರ್ತಿ ಚಿತ್ರಕ್ಕೆ ಕಥೆ ಬರೆದಿದ್ದು, ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕಥೆ ಬರೆದು ಆ್ಯಕ್ಷನ್&ಕಟ್ ಹೇಳಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. "ಒಬ್ಬ ಲಾಯರ್ ಅನಿರೀಕ್ಷಿತವಾಗಿ ರಾಜ್ಯದ ಸಿಎಂ ಆಗುತ್ತಾನೆ. ನಂತರ ಆತ ಏನೇನು ಸುಧಾರಣೆ ತರಲು ಬಯಸುತ್ತಾನೆ? ಬದಲಾವಣೆ ತರುವಲ್ಲಿ ಯಶಸ್ವಿಯಾಗುತ್ತಾನಾ? ಎಂಬ ವಿಷಯಗಳನ್ನು ಇಂಟರೆಸ್ಟಿಂಗ್ ಆಗಿ ಹೇಳುವ ಪ್ರಯತ್ನ ಮಾಡಿದ್ದೇವೆ' ಎಂದು ಓಂ ಸಾಯಿಪ್ರಕಾಶ್ ಮಾಹಿತಿ ನೀಡುತ್ತಾರೆ. "ಕೆರೆಬೇಟೆ' ಬಳಿಕ ಗೌರಿಶಂಕರ್ ಈ ಚಿತ್ರಕ್ಕೆ ನಾಯಕನಾಗಿದ್ದು, "ಇದು ನನ್ನ ಮೂರನೇ ಚಿತ್ರ. "ಕೆರೆಬೇಟೆ' ಬಳಿಕ ಒಳ್ಳೆ ಕಥೆಗಾಗಿ ಕಾಯುತ್ತಿದ್ದ ಸಮಯದಲ್ಲಿ ಸಿಕ್ಕ ಚಿತ್ರವಿದು. ಓಂ ಸಾಯಿಪ್ರಕಾಶ್ ಅವರಂತಹ ಹಿರಿಯ, ಅನುಭವಿ ನಿರ್ದೇಶಕರ ಜತೆ ಕೆಲಸ ಮಾಡಿದ್ದು ಖುಷಿ ಇದೆ' ಎಂದರು. ಎಲ್ಲವೂ ಅಂದುಕೊಂಡಂತಾದರೆ ಇದೇ ಆಗಸ್ಟ್ನಲ್ಲಿ "ಕಾಮನ್ಮ್ಯಾನ್' ರಿಲೀಸ್ ಆಗಲಿದೆ. ಗೌರಿಶಂಕರ್, ಸೋನು ಲಾದ್ವಾ, ಅಶೋಕ್, ಗಣೇಶರಾವ್ ಕೇಸರ್ಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತೂಮಿನಾಡ್ ತಾರಾಗಣದಲ್ಲಿದ್ದಾರೆ. ವಿನಯ್ ಚಂದ್ರ ಸಂಗೀತ, ಜೆ.ಜಿ.ಕೃಷ್ಣ ಮತ್ತು ದೀಪಕ್ ಛಾಯಾಗ್ರಹಣ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ.