

ನವದೆಹಲಿ: ಕೇರಳದಲ್ಲಿ ಸಂಚಲನವನ್ನೇ ಸೃಷ್ಟಿಸಿರುವ 15 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಸ್ವಪ್ನಾ ಸುರೇಶ್ ಬ್ಯಾಂಕ್ ಲಾಕರ್ಗಳಲ್ಲಿ ಭಾರಿ ನಿಧಿಯೇ ಪತ್ತೆಯಾಗಿದೆ. ಸ್ಟೇಟ್ ಬ್ಯಾಂಕ್ ಇಂಡಿಯಾ ಹಾಗೂ ಫೆಡರಲ್ ಬ್ಯಾಂಕ್ನ ಲಾಕರ್ಗಳಲ್ಲಿ ಇಡಲಾಗಿದ್ದ ಒಂದು ಕೋಟಿ ರೂ. ನಗದು ಹಾಗೂ ಒಂದು ಕೆ.ಜಿ. ಚಿನ್ನವನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಫೆಡರಲ್ ಬ್ಯಾಂಕ್ ಲಾಕರ್ನಲ್ಲಿ 36.5 ಲಕ್ಷ ರೂ. ಹಾಗೂ ಎಸ್ಬಿಐ ಲಾಕರ್ನಲ್ಲಿ 64 ಲಕ್ಷ ರೂ. ಹಾಗೂ 984 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಸ್ವಪ್ನಾಳನ್ನು ಆರಂಭದಲ್ಲಿ ವಿಚಾರಣೆಗೊಳಪಡಿಸಿದಾಗ ಕಳ್ಳಸಾಗಣೆಯಿಂದ ಬಂದ ಹಣವನ್ನು ಲಾಕ್ರಗಳಲ್ಲಿ ಇಟ್ಟಿರುವುದಾಗಿ ಹೇಳಿದ್ದಳು.
ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ಸಲ್ಲಿಸಿರುವ ದಾಖಲೆಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಸ್ವಪ್ನಾ ಹಾಗೂ ಪ್ರಕರಣದ ಇನ್ನೊಬ್ಬ ಆರೋಪಿ ಸಂದೀಪ್ ನಾಯರ್ನನ್ನು ಆಗಸ್ಟ್ 21ರವರೆಗೆ ರಾಷ್ಟ್ರಿಯ ತನಿಖಾ ದಳದ ವಶಕ್ಕೆ ನೀಡಲಾಗಿದೆ.
ಈ ನಡುವೆ ತನಿಖಾ ದಳದ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸ್ವಪ್ನಾ ಹಾಗೂ ಸಂದೀಪ್ ನಾಯರ್ ಜಾಮೀನು ಕೋರಿ ಎನ್ಐಎ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಆಗಸ್ಟ್ 5ರಂದು ವಿಚಾರಣೆಗೆ ಬರಲಿದೆ.