"ನನಗೆ ಮಾತ್ರವಲ್ಲ, ನಮ್ಮಪ್ಪನಿಗೂ ನೀನೇ..."! ಯುವತಿ ಬರೆದಿಟ್ಟ ಡೆತ್​ನೋಟ್​ನಲ್ಲಿತ್ತು ಬೆಚ್ಚಿಬೀಳಿಸೋ ಸಂಗತಿ | Woman Suicide

ವಿಜಯವಾಣಿ (67)
Published on

Woman Suicide: ಗಂಡ ಮತ್ತು ಗಂಡನ ಮನೆಯವರ ವಿಪರೀತ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ತಾಳಲಾರದ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದಲ್ಲಿ ವರದಿಯಾಗಿದೆ.

ಅಪಾರ್ಟ್​ಮೆಂಟ್​ನಲ್ಲಿ ಗಂಡ ಮತ್ತು ಪುಟ್ಟ ಮಗಳೊಂದಿಗೆ ವಾಸವಿದ್ದ ಕೊಲ್ಲಂ ಮೂಲದ ವಿಪಂಚಿಕಾ ಮಣಿ (33), ಜುಲೈ 8ರಂದು ಫ್ಲಾಟ್​ನ ರೂಮ್​ನಲ್ಲಿ ಮೊದಲು ತನ್ನ ಒಂದೂವರೆ ವರ್ಷದ ಮಗಳನ್ನು ಹತ್ಯೆಗೈದು, ನಂತರ ತಾನು ಸಾವಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಕಾರಣವೇನು? ಎಂಬುದನ್ನು ಡೆತ್​ನೋಟ್​ನಲ್ಲಿ ವಿವರವಾಗಿ ಬರೆದಿಟ್ಟ ಮಣಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪುತ್ರಿ ಹತ್ಯೆಗೈದು ಆತ್ಮಹತ್ಯೆ ಏಕೆ?

ದುಬೈನಲ್ಲಿ ಪತಿಯೊಂದಿಗೆ ನೆಲೆಸಿದ್ದ ಮಣಿ ಮತ್ತು ಆಕೆಯ ಪುಟ್ಟ ಮಗಳ ದುರಂತ ಅಂತ್ಯಕ್ಕೆ ವರದಕ್ಷಿಣೆಗಾಗಿ ಪತಿ ಮತ್ತು ಪತಿಯ ಮನೆಯವರು ನೀಡಿರುವ ಚಿತ್ರಹಿಂಸೆಯೇ ಕಾರಣ ಎಂಬುದು ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ. ಮೃತ ಮಣಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಆತ್ಮಹತ್ಯೆ ಹಿಂದಿರುವ ಕಾರಣವನ್ನು ಎಳೆ ಎಳೆಯಾಗಿ ವಿವರಿಸಿದ್ದು, ಆಕೆಯ ಪತಿ ನಿತೀಶ್ ವಲಿಯವೀಟ್ಟಿಲ್, ಅತ್ತಿಗೆ ನೀತು ಬೆನ್ನಿ ಮತ್ತು ಮಾವ ಮೋಹನನ್ ತನ್ನ ಸಾವಿಗೆ ಕಾರಣ ಎಂದು ದೂರಿದ್ದಾರೆ. ಪತ್ರದ ಆಧಾರದ ಮೇರೆಗೆ ಈ ಮೂವರ ವಿರುದ್ಧ ಕೊಲ್ಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದೆ ಡೆತ್​ನೋಟ್​ನಲ್ಲಿ?

ವಿಪಂಚಿಕಾ ಮಣಿ ಬರೆದಿರುವ ಪ್ರಕಾರ, “ಇಷ್ಟುದಿನ ನಾನು ಅವರ ಕಿರುಕುಳವನ್ನು ಮೌನವಾಗಿಯೇ ಸಹಿಸಿಕೊಳ್ಳುತ್ತಿದ್ದೆ. ಮದುವೆ ಅಂದುಕೊಂಡಂತೆ ಅದ್ಧೂರಿಯಾಗಿ ಇರಲಿಲ್ಲ. ಅವರಿಗೆ ನಮ್ಮ ಮನೆಯವರು ಕೊಟ್ಟ ವರದಕ್ಷಿಣೆ ಸಾಕಾಗಲಿಲ್ಲ. ನಾವು ಕೊಟ್ಟಿದ್ದರಲ್ಲಿ ಕಾರು ಇರಲಿಲ್ಲ ಎಂದು ಅವರು ಆಗಾಗ್ಗೆ ಚುಚ್ಚಿ ಮಾತಾಡುತ್ತಿದ್ದರು. ಅವರ ಬಳಿ ಸಾಕಷ್ಟು ಹಣವಿದ್ದರೂ, ನನ್ನ ಸಂಬಳಕ್ಕಾಗಿ ವಿಪರೀತ ಕಿರುಕುಳ ಕೊಡುತ್ತಿದ್ದರು" ಎಂದಿದ್ದಾರೆ.

"ಪತಿ ನನ್ನನ್ನು ನಾಯಿಯಂತೆ ಥಳಿಸುತ್ತಿದ್ದರು. ನನ್ನ ಗಂಡ ಅಶ್ಲೀಲತೆಯಿಂದ ಪ್ರೇರಿತನಾಗಿ ಬಲವಂತವಾಗಿ ಲೈಂಗಿಕ ಕ್ರಿಯೆಗಳಿಗೆ ಒಳಪಡಿಸುತ್ತಿದ್ದ. ಏಳು ತಿಂಗಳ ಗರ್ಭಿಣಿಯಾಗಿದ್ದಾಗ ನನಗೆ ಊಟ ಕೊಡದೆ, ಮನೆಯಿಂದ ಹೊರಗೆ ಹಾಕಿದ್ದರು. ನನ್ನ ಮಾವ ನನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಪತಿಯ ತಂದೆಯ ವರ್ತನೆ ಬಗ್ಗೆ ನಾನು ಅವರಿಗೆ ಹೇಳಿದ್ದೆ. ಇದಕ್ಕೆ ಅವರು, 'ನಾನು ನಿನ್ನನ್ನು ಮದುವೆಯಾಗಿದ್ದು ನನಗಾಗಿ ಮಾತ್ರವಲ್ಲ. ನನ್ನ ತಂದೆಗೂ ಸೇರಿಸಿಯೇ' ಎಂದಿದ್ದರು" ಎಂದು ಡೆತ್​ನೋಟ್​ನಲ್ಲಿ ಆರೋಪಿಸಿದ್ದಾರೆ. ಈ ಪ್ರಕರಣವನ್ನು ದುಬೈ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್),

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net