ಕಿರುತೆರೆ ನಟಿ ಮನೆಗೆ ನುಗ್ಗಿ ಯುವಕರ ಗುಂಪಿನಿಂದ ಹಲ್ಲೆ: ಅಶ್ಲೀಲ ಪದಗಳಿಂದ ನಿಂದನೆ

Actor
Published on

ತಿರುವನಂತಪುರಂ: ಕೇರಳದ ಕಿರುತೆರೆ ನಟಿ ಆರ್ದ್ರಾ ದಾಸ್ ಮನೆಯನ್ನು ದುಷ್ಕರ್ಮಿಗಳ ಗುಂಪೊಂದು ಹಾನಿಗೊಳಿಸಿರುವ ಘಟನೆ ಬುಧವಾರ ನಡೆದಿದೆ.

ಪಜಾಯನೂರು ಪೊಲೀಸ್​ ಮೂಲಗಳ ಪ್ರಕಾರ ಕಿಡಿಗೇಡಿಗಳ ಗುಂಪೊಂದು ಶನಿವಾರ ರಾತ್ರಿ ತಿರುವಿಲ್ವಮಲದಲ್ಲಿರುವ ನಟಿಯ ನಿವಾಸಕ್ಕೆ ಆಗಮಿಸಿ, ನಟಿಯ ತಾಯಿಯ ಮೇಲೆ ಹಲ್ಲೆ ನಡೆಸಿ, ಮನೆಯ ವಸ್ತುಗಳನೆಲ್ಲಾ ಧ್ವಂಸ ಮಾಡಿ ಬಳಿಕ ಮನೆಯ ಹೊರಂಗಾಣದಲ್ಲಿದ್ದ ಪಾಟ್​ಗಳನ್ನು ಒಡೆದು ಹಾಕಿದ್ದಾರೆಂದು ತಿಳಿಸಿದ್ದಾರೆ.

ತಾಯಿ ಶಿವಕುಮಾರಿ ದೂರು ನೀಡಿದ್ದು, ಹಲ್ಲೆ ಮಾಡಿ ಮನೆಯನ್ನು ಹಾನಿಗೊಳಿಸಿದಲ್ಲದೆ ಅಸಭ್ಯ ಪದಗಳಿಂದ ನಿಂದಿಸಿದರು ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಜಾಯನೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ನಟಿ ಆರ್ದ್ರಾ ಕೆಲ ಕಿಡಿಗೇಡಿಗಳು ಪಾನಮತ್ತರಾಗಿ ನಮ್ಮ ಮನೆಯ ಆವರಣದಲ್ಲಿ ಗಲಭೆ ನಡೆಸಿದ್ದಾರೆ. ಕಿಡಿಗೇಡಿಗಳು ಪಿಯುಸಿ ಮುಗಿಸಿದ್ದು, ಇದಕ್ಕು ಮುನ್ನ ಸಾಕಷ್ಟು ಬಾರಿ ನಮ್ಮೊಂದಿಗೆ ವಾಗ್ವಾದ ನಡೆಸಿದ್ದರು. ಆದರೆ ಈ ಬಾರಿ ಅವರು ಕೆಟ್ಟದಾಗಿ ಮಾತನಾಡಿದರು. ಅದನ್ನು ಕೇಳಿಸಿಕೊಂಡು ನಮ್ಮ ತಾಯಿ ಸುಮ್ಮನಿದ್ದರೂ ಸಹ ಮನೆಯತ್ತ ಕಲ್ಲು ತೂರಾಟ ನಡೆಸಲು ಆರಂಭಿಸಿದರು ಎಂದು ನಟಿ ದೂರಿದ್ದಾರೆ.

ಕಿಡಿಗೇಡಿಗಳಲ್ಲಿ ಓರ್ವ ಚಾಕುವನ್ನು ಹೊಂದಿದ್ದ, ಅಲ್ಲದೆ ನಮ್ಮ ತಾಯಿ ಧರಿಸಿದ್ದ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ ಎಂದು ದೂರಿದ್ದಾರೆ. ಘಟನೆ ನಡೆಯುವ ಸಮಯದಲ್ಲಿ ಆರ್ದ್ರಾ ಮತ್ತು ತಂದೆ ಅನಂತ ಲಕ್ಷ್ಮಣ ತಿರುವನಂತಪುರಂನಲ್ಲಿದ್ದರು. ಆರ್ದ್ರಾ ಅವರ ತಾಯಿಗೆ ಗಂಭೀರವಾದ ಗಾಯಗಳಾಗಿದ್ದು, ಪಲಕ್ಕಾಡ್​ನಲ್ಲಿನ ಸಂಬಂಧಿಕರು ಅವರನ್ನು ಒಟ್ಟಪಾಲಂ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ಪಜಾಯನೂರು ಪೊಲೀಸರು 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಆರ್ದ್ರಾ ಕುಟುಂಬ ಎರಡು ಆಸ್ತಿ ವಿಚಾರದಲ್ಲಿನ ಗಡಿ ವಿವಾದದಲ್ಲಿ ನೆರೆಯವರಿಂದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪ್ರಕರಣವನ್ನು ಶಿವಕುಮಾರಿ ಅವರು ಮೊದಲೇ ದಾಖಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net