ಕೇರಳದಲ್ಲಿ ಜಲಪ್ರಳಯ 21 ಮೃತದೇಹ ಪತ್ತೆ: ಹಲವರು ನಾಪತ್ತೆ, ರಕ್ಷಣಾ ಕಾರ್ಯ ಚುರುಕು

Kerala
Published on

ತಿರುವನಂತಪುರಂ: ಕೇರಳದಲ್ಲಿ ಧಾರಾಕಾರ ಮಳೆಯಿಂದ ಉಂಟಾಗಿರುವ ಪ್ರವಾಹ ಹಾಗೂ ಭೂ ಕುಸಿತಗಳಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ. ದಕ್ಷಿಣ ಮತ್ತು ಕೇಂದ್ರ ಕೇರಳಗಳಲ್ಲಿ ಮಳೆ ಅನಾಹುತ ಸೃಷ್ಟಿಸಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಐದು ಮಕ್ಕಳು ಸಹಿತ ಕನಿಷ್ಠ 13 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಾರು ಜನರು ಸಂತ್ರಸ್ತರಾಗಿದ್ದು, ಭೂ ಕುಸಿತದಲ್ಲಿ ಮನೆ ಹಾಗೂ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಆಕ್ರಂದನ ಹೃದಯ ಕಲಕುವಂತಿದೆ. ಗುಡ್ಡ ಕುಸಿತ ಸಂಭವಿಸಿರುವ ಜಾಗಗಳಲ್ಲಿ ರಕ್ಷಣಾ ಸಿಬ್ಬಂದಿ ಆಳಕ್ಕೆ ಅಗೆದಷ್ಟೂ ಶವಗಳು ಸಿಗುತ್ತಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿಯಿದೆ.

ಕೊಟ್ಟಿಕಲ್​ನಲ್ಲಿ 12, ಪೀರುಮೇಡುನಲ್ಲಿ ಒಂದು ಶವ ಭಾನುವಾರ ಸಿಕ್ಕಿವೆ. ಎರಡು ಮೃತದೇಹಗಳು ಇಡುಕ್ಕಿ ಜಿಲ್ಲೆಯ ಕಂಜಾರ್​ನಲ್ಲಿ ಶನಿವಾರವೇ ಪತ್ತೆಯಾಗಿದ್ದವು. ಭೂ ಸೇನೆ, ವಾಯುಪಡೆ (ಐಎಎಫ್) ಹಾಗೂ ನೌಕಾಪಡೆಗಳ ಯೋಧರು ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ಆಡಳಿತಕ್ಕೆ ನೆರವಾಗುತ್ತಿದ್ದಾರೆ. ರಾಜ್ಯದ ಕೆಲವೆಡೆ ಎರಡೇ ಗಂಟೆ ಅವಧಿಯಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ. ಭಾರಿ ವರ್ಷಧಾರೆಗೆ ‘ಮಿನಿ-ಮೇಘ ಸ್ಪೋಟ’ ಕಾರಣವಾಗಿರಬಹುದೆಂದು ತಜ್ಞರು ಅಂದಾಜು ಮಾಡಿದ್ದಾರೆ. ಪೀರುಮೇಡ್​ನಲ್ಲಿ ಅತಿ ಹೆಚ್ಚು 24 ಸೆಂ.ಮೀ. ಮಳೆ ಬಿದ್ದಿದೆ. ಚೆರುಥೋನಿ, ಚಾಲಕುಡಿ ಮತ್ತು ಪೂಂಜಾರ್​ನಲ್ಲಿ 14 ಸೆಂ.ಮೀ. ಮಳೆ ದಾಖಲಾಗಿದೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಗುಡ್ಡ ಜರಿತಗಳಿಂದ ಹೆಚ್ಚಿನ ಪ್ರಾಣ ಹಾನಿ ಸಂಭವಿಸಿದೆ.

ಒಂದೇ ಕುಟುಂಬದ 3 ತಲೆಮಾರು ಭೂಸಮಾಧಿ

ಕೊಟ್ಟಾಯಂ ಜಿಲ್ಲೆಯ ಕೊಟ್ಟಿಕಲ್​ನಲ್ಲಿ ಒಂದೇ ಕುಟುಂಬದ ಮೂರು ತಲೆಮಾರಿನ ಆರು ಜನರು ಭೂಕುಸಿತಕ್ಕೆ ಬಲಿಯಾಗಿದ್ದಾರೆ. 75 ವರ್ಷದ ತಾಯಿ, 45 ವರ್ಷದ ಮಗ, 35 ವರ್ಷದ ಸೊಸೆ ಮತ್ತು 14, 12 ಹಾಗೂ 10 ವರ್ಷದ ಮೂರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ. ಮೂರು ಶವ ಶನಿವಾರವೇ ಸಿಕ್ಕಿದ್ದು ಉಳಿದ ಮೂರು ಭಾನುವಾರ ಪತ್ತೆಯಾಗಿವೆ.

ಕೇಂದ್ರದ ಭರವಸೆ

ಜಲಪ್ರಳಯದಿಂದ ನಲು ಗಿರುವ ಕೇರಳಕ್ಕೆ ಕೇಂದ್ರ ಸರ್ಕಾರ ಎಲ್ಲ ನೆರವನ್ನು ಒದಗಿಸಲಿದೆ ಎಂದು ಗೃಹ ಸಚಿವ ಅಮಿತ್ ಷಾ ಆಶ್ವಾಸನೆ ನೀಡಿದ್ದಾರೆ. ಸರ್ಕಾರ ಸತತ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ದಳವನ್ನು (ಎನ್​ಡಿಆರ್​ಎಫ್) ಈಗಾಗಲೇ ರವಾನಿಸಲಾಗಿದೆ ಎಂದು ಷಾ ಹೇಳಿದ್ದಾರೆ.

ನೆರವಿಗಾಗಿ ವೃದ್ಧೆ ಮೊರೆ

ಭೂಕುಸಿತವಾದ ಕೊಟ್ಟಾಯಂ ಜಿಲ್ಲೆಯ ಕೊಟ್ಟಿಕಲ್​ನಲ್ಲಿ ಸರ್ವಸ್ವವನ್ನೂ ಕಳೆದುಕೊಂಡ ವೃದ್ಧೆಯೊಬ್ಬಳು ಮಳೆ ನೀರಲ್ಲೇ ಅತ್ತಿಂದಿತ್ತ ಓಡಾಡುತ್ತಾ ನೆರವಿಗಾಗಿ ಮೊರೆಯಿಡುತ್ತಿರುವ ದೃಶ್ಯ ಮನ ಕಲಕುವಂತಿತ್ತು. ‘ನಾನು ಪ್ರತಿಯೊಂದನ್ನೂ ಕಳೆದುಕೊಂಡಿದ್ದೇನೆ. ನಾನು ಹೋಗುವುದಾದರೂ ಎಲ್ಲಿಗೆ? ನನಗೆ ಯಾರು ಆಶ್ರಯ ನೀಡುತ್ತಾರೆ?’ ಎಂದು ಆಕೆ ಅಳುತ್ತಾ ಕೇಳುತ್ತಿದ್ದುದು ಹೃದಯ ಹಿಂಡುವಂತಿತ್ತು. ಗುಡಿಸಲು ಕಟ್ಟಿಕೊಳ್ಳಲು ಜಾಗ ನೀಡುವಂತೆ ಸಿಎಂ ವಿಜಯನ್​ಗೆ ಆಕೆ ಮನವಿ ಮಾಡಿದ್ದಾಳೆ.

ಪ್ರತಿಪಕ್ಷ ಆರೋಪ

ಸಂತ್ರಸ್ತ ಪ್ರದೇಶಗಳಲ್ಲಿ ಸಕಾಲದಲ್ಲಿ ಪರಿಹಾರ ಕಾರ್ಯಗಳನ್ನು ಆರಂಭಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೊಕ್ಕಯಾರ್ ಮತ್ತು ಕೊಟ್ಟಿಕಲ್​ಗೆ ಭೇಟಿ ನೀಡಿದ್ದ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಆರೋಪಿಸಿದ್ದಾರೆ. ಈ ನಡುವೆ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಭಾನುವಾರ ಮತ್ತು ಸೋಮವಾರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡದಂತೆ ಭಕ್ತರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.

ಅಪ್ಪಿಕೊಂಡ ಸ್ಥಿತಿಯಲ್ಲಿ ಮಕ್ಕಳ ಸಾವು

ಕೆಸರಿನಲ್ಲಿ ಹೂತು ಹೋಗಿದ್ದ ಮೂರು ಮಕ್ಕಳ ಶವಗಳನ್ನು ಹೊರತೆಗೆಯಲಾಗಿದೆ. 8, 7 ಹಾಗೂ 4 ವರ್ಷದ ಈ ಮಕ್ಕಳು ಪರಸ್ಪರರನ್ನು ಆಲಂಗಿಸಿಕೊಂಡ ಸ್ಥಿತಿಯಲ್ಲೇ ಜೀವಂತ ಸಮಾಧಿಯಾಗಿದ್ದು ಆ ದೃಶ್ಯ ಕಣ್ಣೀರು ತರಿಸುವಂತಿತ್ತು.

ಪ್ರಧಾನಿ ಸಂತಾಪ

ಕೇರಳದಲ್ಲಿ ಭಾರಿ ಮಳೆಯಿಂದ ಪ್ರಾಣ ಹಾನಿ ಹಾಗೂ ಅಪಾರ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಿಎಂ ಪಿಣರಾಯಿ ವಿಜಯನ್​ರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮೋದಿ, ಪರಿಸ್ಥಿತಿಯ ಮಾಹಿತಿ ಪಡೆದರು.

ನೀರಿನ ಮಟ್ಟ ಏರಿಕೆ

ಧಾರಾಕಾರ ಮಳೆಯಿಂದಾಗಿ ಮದಮೋನ್, ಕಲ್ಲುಪ್ಪರ, ತುಂಪಮನ್, ಪುಲ್ಲಕಯಾರ್, ಮಣಿಕ್ಕಲ್, ವೆಲ್ಲಯ್ಕಡವು ಮತ್ತು ಅರುವಿಪುರಂ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರುತ್ತಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡ ಈಗ ತುಸು ದುರ್ಬಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net