ರೂಮ್​ ನಂ.32, ಕೆಲವೊಮ್ಮೆ ಮೌನ...! ತನ್ನವರನ್ನೇ ಭೀಕರವಾಗಿ ಹತ್ಯೆಗೈದ ಅಫಾನ್​ ಮನಸ್ಥಿತಿ ಬಗ್ಗೆ ಖಾಕಿ ಮಾತು | Mass Murder

ವಿಜಯವಾಣಿ - 2025-02-28T171127.417
Published on

Kerala Mass Murder: ಅಫಾನ್ ಎಂಬ ಯುವಕನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಇದೀಗ ಕೇರಳ ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ಪ್ರೇಯಸಿಯೂ ಸೇರಿದಂತೆ ಕುಟುಂಬದ ಐವರನ್ನು 23 ವರ್ಷದ ಅಫಾನ್​, ಕೇರಳದ ವೆಂಜರಮೂಡಿನಲ್ಲಿ ಬರ್ಬರವಾಗಿ ಹತ್ಯೆಗೈದ ಪ್ರಕರಣ ನಗರದ ಪೊಲೀಸರನ್ನು ಭಾರೀ ಗೊಂದಲಕ್ಕೆ ದೂಡಿದೆ. ಪ್ರಸ್ತುತ ಕೊಲೆಯ ಹಿಂದಿರುವ ಕಾರಣವೇನು? ತನ್ನವರನ್ನೇ ಇಷ್ಟೂ ಕ್ರೂರವಾಗಿ ಹತ್ಯೆಗೈಯುವ ಉದ್ದೇಶ ಏನಿತ್ತು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೆಲ್ಲದರ ಮಧ್ಯೆಯೇ ಹತ್ಯೆ ಹಿಂದಿದ್ದ ಕಾರಣವನ್ನು ಪತ್ತೆಹಚ್ಚಿದ್ದಾರೆ.

ಆತನ ನಡೆಯ ಅಚ್ಚರಿ

ವೆಂಜರಮೂಡು ಹತ್ಯಾಕಾಂಡಕ್ಕೆ ಆರ್ಥಿಕ ಬಿಕ್ಕಟ್ಟು ಪ್ರಮುಖ ಕಾರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಆರೋಪಿ ಅಫಾನ್ ಕುಟುಂಬವು ಲಕ್ಷಾಂತರ ರೂಪಾಯಿ ಸಾಲ ಮಾಡಿತ್ತು. ಇದೇ ಸಾಲ ಸಾಮೂಹಿಕ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ವೈದ್ಯಕೀಯ ಕಾಲೇಜಿನಲ್ಲಿ ಸುಧಾರಿಸಿಕೊಳ್ಳುತ್ತಿರುವ ಅಫಾನ್​, ಬಹುತೇಕ ಗುಣಮುಖನಾಗಿದ್ದಾನೆ. ಆತನ ಪ್ರತಿಯೊಂದು ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿರುವ ಖಾಕಿ ಪಡೆ, ಸದ್ಯದ ಮಟ್ಟಿಗೆ ಅಫಾನ್ ಮನಸ್ಥತಿ ಹೇಗಿದೆ ಎಂಬುದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.

ಕೈಗೆ ಕೋಳ, ಕಾಲುಗಳು ಲಾಕ್​

ವೈದ್ಯಕೀಯ ಕಾಲೇಜು ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಹೃದ್ರೋಗ ವಿಭಾಗದ ಎದುರಿಗಿರುವ ಕೊಠಡಿ ಸಂಖ್ಯೆ 32ರಲ್ಲಿ ಅಫಾನ್​ ಇದ್ದಾನೆ. ಆರೋಪಿ ಸುತ್ತ ಇಬ್ಬರು ಪೊಲೀಸರ 24 ಗಂಟೆಗಳ ಭದ್ರತೆಯಿದೆ. ಹೀಗಾಗಿ ಆತ ಎಲ್ಲಿಯೂ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲಾಗಿದೆ. ವಿಷ ಸೇವಿಸಿದ ಮೊದಲ ದಿನದ ಚಿಕಿತ್ಸೆಯ ಕೆಲವು ದಿನಗಳಲ್ಲಿ, ಅಫಾನ್​ ಕೈಗಳಿಗೆ ಕೋಳ ಹಾಕಲಾಗಿತ್ತು. ಮತ್ತು ಕಾಲುಗಳಿಗೆ ಬಟ್ಟೆಯಿಂದ ಕಟ್ಟಲಾಗಿತ್ತು. ಇನ್ನೊಂದು ದಿನ, ಕಾಲಿನ ಗಂಟನ್ನು ಬಿಡಿಸಿ, ಒಂದು ಕೈಗೆ ಮಾತ್ರ ಕೋಳ ಹಾಕಿ ಹಾಸಿಗೆಗೆ ಕಟ್ಟಲಾಗಿತ್ತು. ಮೂಲಭೂತ ಅಗತ್ಯಗಳಿಗಾಗಿ ಮಾತ್ರ ಅವನಿಗೆ ಹಾಕಲಾಗಿದ್ದ ಕೋಳವನ್ನು ಬಿಚ್ಚುತ್ತಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೆರೆಡು ದಿನಗಳು ಮಾತ್ರ ಆಸ್ಪತ್ರೆಯಲ್ಲಿ

ಕೆಲವೊಮ್ಮೆ ಅವನು ತಾನು ಯಾವುದೇ ಅಪರಾಧ ಮಾಡಿಲ್ಲ ಎಂಬಂತೆ ವರ್ತಿಸುತ್ತಾನೆ. ಇನ್ನೂ ಕೆಲವೊಮ್ಮೆ ಮೌನಕ್ಕೆ ಶರಣಾಗುತ್ತಾನೆ. ಕೊಲೆಗೈದ ಕುರಿತು ಒಂದಷ್ಟು ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳುತ್ತಾನೆ. ಊಟ ತಿನ್ನಲು ಯಾವುದೇ ಆಸಕ್ತಿ ತೋರುವುದಿಲ್ಲ. ಯಾವುದೇ ಭಾವನೆಗಳಿಲ್ಲದೆ, ಕೊಲೆ ಘಟನೆಯನ್ನು ವಿವರಿಸುತ್ತಾನೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ನಿನ್ನೆ (ಫೆ.27) ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಅಫಾನ್ ಪ್ರಸ್ತುತ ಯಾವುದೇ ಮಾನಸಿಕ ಸಮಸ್ಯೆಗಳನ್ನು ಹೊಂದಿಲ್ಲ ಮತ್ತು ಆರೋಗ್ಯವಾಗಿದ್ದಾನೆ ಎಂದು ದೃಢಪಡಿಸಲಾಗಿದೆ. ರಕ್ತ ಪರೀಕ್ಷೆಯ ಫಲಿತಾಂಶಗಳಲ್ಲಿ ಇಲ್ಲಿಯವರೆಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದೆ. ಇನ್ನೂ 2 ದಿನಗಳವರೆಗೆ ಆಸ್ಪತ್ರೆಯಲ್ಲಿ ಇರಬೇಕು ಎಂದು ವೈದ್ಯರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net