

ಕೋಯಿಕ್ಕೋಡ್: ಮಲಗಿದ್ದ ಪತ್ನಿಯ ತಲೆ ಕತ್ತರಿಸಿ ಕೊಲೆ ಮಾಡಿರುವ ಘಟನೆ ಕೇರಳದ ಕೋಯಿಕ್ಕೋಡ್ನಲ್ಲಿ ನಡೆದಿದ್ದು, ಪತ್ನಿ ಶೀಲ ಶಂಕಿಸಿ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ.
ಮುಹ್ಸಿಲ (20) ಕೊಲೆಯಾದ ಮಹಿಳೆ. ಜಿಲ್ಲೆಯ ಮುಕ್ಕಮ್ ಮುನ್ಸಿಪಾಲಿಟಿಯ ಚೆರುವಡಿ ಪಜಂಪರಂಬು ನಿವಾಸಿ ಜಹೀರ್ ಕುಟ್ಟಿಯಾಲಿ (30) ಎಂಬಾತನನ್ನು ಮಹ್ಸಿಲ ಕಳೆದ ವರ್ಷ ಸೆಪ್ಟೆಂಬರ್ 5ರಂದು ಮದುವೆಯಾಗಿದ್ದ. ಜಹೀರ್ ಅವರದ್ದು ಅವಿಭಕ್ತ ಕುಟುಂಬ. ತಂದೆ-ತಾಯಿ, ನಾಲ್ಕು ಸಹೋದರರು ಹಾಗೂ ಓರ್ವ ಸಹೋದರಿಯೊಂದಿಗೆ ನೆಲೆಸಿದ್ದಾನೆ.
ಮಂಗಳವಾರ (ಫೆ.16) ಬೆಳಗ್ಗೆ ಜಹೀರ್ ಬೆಡ್ ರೂಮ್ನಿಂದ ಜೋರಾದ ಶಬ್ದವೊಂದು ಕೇಳಿದೆ. ಪಕ್ಕದಲ್ಲೇ ಮಲಗಿದ್ದ ತಂದೆ-ತಾಯಿ ಎಚ್ಚರಗೊಂಡು ಓಡಿ ಬಂದು ಬಾಗಿಲು ತೆಗೆಯುವಂತೆ ಮಗನನ್ನು ಕೇಳುತ್ತಾರೆ. ಆದರೆ, ಜಹೀರ್ ಬಾಗಿಲು ತಗೆಯಲು ನಿರಾಕರಿಸಿದ್ದಾನೆ. ಕೆಲ ಸಮಯದ ಬಳಿಕ ಬಾಗಿಲು ತೆಗೆದು ರಕ್ತಸಿಕ್ತ ಚಾಕುವಿನೊಂದಿಗೆ ಜಹೀರ್ ಓಡಿ ಹೋದನು.
ಮಗ ಓಡಿಹೋಗಿದ್ದನ್ನು ನೋಡಿ ಕೋಣೆಯೊಳಗೆ ಹೋಗಿ ನೋಡಿದ ತಂದೆ-ತಾಯಿಗೆ ಬರಸಿಡಿಲು ಬಡಿದಂತಾಯಿತು. ಅವರ ಸೊಸೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದು ಅವರ ಕಣ್ಣಿಗೆ ಬಿದ್ದಿತು. ತಕ್ಷಣ ಕಿರುಚಿಕೊಂಡು ನೆರೆ ಮನೆಯವರನ್ನು ಎಚ್ಚರಿಸಿದರು. ಆದರೆ, ಏಕೆ ಕೊಲೆ ನಡೆದಿದೆ ಎಂಬ ಅರಿವು ಯಾರಿಗು ಇರಲಿಲ್ಲ.
ಈ ವೇಳೆ ಜಹೀರ್ನನ್ನು ಕೆಲವರು ಹಿಂಬಾಲಿಸಿ ಹಿಡಿದುಕೊಂಡರು. ಅಷ್ಟರಲ್ಲಾಗಲೇ ಜಹೀರ್ ಪಾಲಕರ ಮಾಹಿತಿ ಮೇರೆಗೆ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿದರು ಮತ್ತು ಆತನನ್ನು ಬಂಧಿಸಿದರು. ತದನಂತರ ವಿಚಾರಣೆ ವೇಳೆ ಜಹೀರ್ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ.
ಗಲ್ಫ್ ದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಜಹೀರ್ ಕರೊನಾ ಕಠಿಣ ಪರಿಸ್ಥಿತಿಯಿಂದಾಗಿ ಭಾರತಕ್ಕೆ ಮರಳಿದ್ದನು. ಬಳಿಕ ತವರಿನಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದನು. ಕಳೆದ ಸೆಪ್ಟೆಂಬರ್ನಲ್ಲಿ ಮದುವೆ ಆಗಿದ್ದ. ಇಬ್ಬರು ಚೆನ್ನಾಗಿಯೇ ಇದ್ದರು ಮತ್ತು ಯಾವುದೇ ಜಗಳವಾಗಲಿ ನಡೆದಿರಲಿಲ್ಲ. ಆದರೆ, ಜಹೀರ್ಗೆ ಪತ್ನಿಯ ನಡತೆ ಬಗ್ಗೆ ಏಕೆ ಸಂಶಯ ಬಂತೋ ಗೊತ್ತಿಲ್ಲ? ಕೊನೆಗೆ ಆಕೆಯನ್ನು ಕೊಲೆ ಮಾಡಿಬಿಟ್ಟಿದ್ದಾನೆ.
ಇನ್ನು ಮದುವೆಯಾದಾಗಿನಿಂದ ಜಹೀರ್, ಸ್ನೇಹಿತರಿಂದ ದೂರ ಉಳಿದಿದ್ದ. ಅಲ್ಲದೆ, ಸ್ನೇಹಿತರ ನಂಬರ್ ಸಹ ಡಿಲೀಟ್ ಮಾಡಿದ್ದ. ಮದುವೆ ನಂತರ ತುಂಬಾ ಖುಷಿಯಾಗಿದ್ದ ಸ್ನೇಹಿತ ಪತ್ನಿಯನ್ನು ಏಕೆ ಕೊಂದ ಎಂಬುದು ಅವರಿಗೂ ಸಹ ತಿಳಿಯುತ್ತಿಲ್ಲವಂತೆ. ಇನ್ನು ಜಹೀರ್ ಸ್ನೇಹಿತ ರಶೀದ್ ಮಾತಿನ ಪ್ರಕಾರ, ಜಹೀರ್ ಮಾನಸಿಕವಾಗಿ ಬಳಲುತ್ತಿದ್ದನಂತೆ. ಸ್ನೇಹಿತರ ಜತೆಯಲ್ಲು ಹೆಚ್ಚಿಗೆ ಮಾತನಾಡುತ್ತಿರಲಿಲ್ಲವಂತೆ.
ಸದ್ಯ ಪತ್ನಿಯನ್ನು ಏಕೆ ಕೊಂದ ಎಂಬುದು ಇನ್ನು ನಿಗೂಢವಾಗಿಯೇ ಇದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)