ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು..; ಪ್ರೀತಿ ಜಿಂಟಾ ಖಂಡನೆಗೆ ಕೇರಳ ಕಾಂಗ್ರೆಸ್​ ರಿಯಾಕ್ಷನ್​​.. ಹೇಳಿದ್ದು ಹೀಗೆ | Preity Zinta

Untitled design (14)
Published on

ತಿರುವನಂತಪುರಂ: ಬಾಲಿವುಡ್ ನಟಿ ಪ್ರೀತಿ ಜಿಂಟಾ(Preity Zinta) ಮುಂಬೈನ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನಿಂದ 18 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಅದನ್ನು ಮನ್ನಾ ಮಾಡಲಾಗಿದೆ ಎಂದು ವರದಿಯ ಆಧಾರದ ಮೇಲೆ ಕಾಂಗ್ರೆಸ್‌ನ ಕೇರಳ ಘಟಕ ಆರೋಪಿಸಿತ್ತು.

122 ಕೋಟಿ ರೂಪಾಯಿ ಹಗರಣ ಪ್ರಕರಣದಲ್ಲಿ ಆರ್‌ಬಿಐ 6 ತಿಂಗಳ ಕಾಲ ನಿಷೇಧಿಸಿದ ಬ್ಯಾಂಕ್ ಇದಾಗಿದೆ. ಇಷ್ಟೇ ಅಲ್ಲ, ಪ್ರೀತಿ ಜಿಂಟಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ವಹಿಸುವ ಹಕ್ಕನ್ನು ಬಿಜೆಪಿಗೆ ನೀಡಿದ್ದಾರೆ. ನ್ಯೂ ಇಂಡಿಯಾ ಕೋಆಪರೇಟಿವ್ ಬ್ಯಾಂಕಿನ ಖಾತೆದಾರರು ತಮ್ಮ ಠೇವಣಿ ಹಣಕ್ಕಾಗಿ ಬೀದಿಗಿಳಿದಿದ್ದಾರೆ ಮತ್ತು ಪ್ರೀತಿ ಜಿಂಟಾ ಅವರ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಕೇರಳ ಕಾಂಗ್ರೆಸ್ ಹೇಳಿಕೊಂಡಿದೆ.

ಕಾಂಗ್ರೆಸ್​​ನ ಈ ಆರೋಪವನ್ನು ಪ್ರೀತಿ ಜಿಂಟಾ ಖಂಡಿಸಿದ್ದಾರೆ. ನನ್ನ ಸಾಮಾಜಿಕ ಜಾಲತಾಣ ಖಾತೆಯನ್ನು ನಾನೇ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಯಾರೂ ನನ್ನ ಸಾಲವನ್ನು ಮನ್ನಾ ಮಾಡಲಿಲ್ಲ. ಸಾಲವನ್ನು 10 ವರ್ಷಗಳ ಹಿಂದೆ ಸಂಪೂರ್ಣವಾಗಿ ಮರುಪಾವತಿಸಲಾಗಿದೆ. ನಕಲಿ ಸುದ್ದಿಗಳನ್ನು ಪ್ರಚಾರ ಮಾಡಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು.ಒಂದು ರಾಜಕೀಯ ಪಕ್ಷ ಅಥವಾ ಅದರ ಪ್ರತಿನಿಧಿ ನನ್ನ ಹೆಸರು ಮತ್ತು ಚಿತ್ರವನ್ನು ಬಳಸಿಕೊಂಡು ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ನನಗೆ ಆಘಾತ ತಂದಿದೆ. ಇದು ಅಸಹ್ಯಕರ ಕೃತ್ಯ ಎಂದು ಪ್ರೀತಿ ಜಿಂಟಾ ಛೀಮಾರಿ ಹಾಕಿದ್ದಾರೆ.

ಆರೋಪಗಳನ್ನು ಖಂಡಿಸಿ ಪ್ರೀತಿ ಜಿಂಟಾ ಮಾಡಿರುವ ಪೋಸ್ಟ್​​ಗೆ ಕೇರಳ ಕಾಂಗ್ರೆಸ್​​ ಪ್ರತಿಕ್ರಿಯಿಸಿದೆ. ಕುಖ್ಯಾತ ಐಟಿ ಸೆಲ್‌ಗೆ ತಮ್ಮ ಖಾತೆಯನ್ನು ಹಸ್ತಾಂತರಿಸಿದ ಇತರ ಸೆಲೆಬ್ರಿಟಿಗಳಿಗಿಂತ ಭಿನ್ನವಾಗಿ ನೀವು ನಿಮ್ಮ ಸ್ವಂತ ಖಾತೆಯನ್ನು ನಿರ್ವಹಿಸುತ್ತಿದ್ದೀರಿ ಎಂದು ತಿಳಿದು ಸಂತೋಷವಾಯಿತು. @realpreityzinta ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು. ನಿಮ್ಮ ಸಾಲದ ಸ್ಥಿತಿಗೆ ಸಂಬಂಧಿಸಿದಂತೆ ನಾವು ಏನಾದರೂ ತಪ್ಪುಗಳನ್ನು ಮಾಡಿದ್ದರೆ ಒಪ್ಪಿಕೊಳ್ಳಲು ನಮಗೆ ಸಂತೋಷವಾಗುತ್ತದೆ. ವರದಿಯಲ್ಲಿ ಇರುವುದನ್ನು ನಾವು ಹಂಚಿಕೊಂಡಿದ್ದೇವೆ ಎಂದು ಹೇಳಿದ ಕೇರಳ ಕಾಂಗ್ರೆಸ್​ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದಿರುವ ಪೋಸ್ಟ್​​ ಅನ್ನು ಹಂಚಿಕೊಂಡಿದೆ.(ಏಜೆನ್ಸೀಶ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net