ತಾಯಿಯ ಅಳುವ ಧ್ವನಿ ಕೇಳಿ ರಕ್ಷಣೆಗೆ ಓಡೋಡಿ ಬಂದ ಮಗಳ ಬರ್ಬರ ಹತ್ಯೆ..!

Abhirami
Published on

ಕೊಲ್ಲಂ: ನೆರೆ ಮನೆಯವರ ದಾಳಿಗೆ ಸಿಲುಕಿದ್ದ ತಾಯಿಯನ್ನು ರಕ್ಷಿಸಲು ಓಡಿ ಬಂದು ಮಗಳು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಉಲಿಯಾಕೋವಿಲ್​ನಲ್ಲಿ ಕಳೆದ ಗುರುವಾರ ನಡೆದಿದೆ.

ಮೃತಳನ್ನು ಅಭಿರಾಮಿ (21) ಎಂದು ಗುರುತಿಸಲಾಗಿದೆ. ಉಮೇಶ್​ ಬಾಬು (62) ಎಂಬಾತ ಅಭಿರಾಮಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಚರಂಡಿ ನೀರಿನ ವಿಚಾರವಾಗಿ ಎರಡು ಕುಟುಂಬದ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಗುರುವಾರ ರಾತ್ರಿ 11 ಗಂಟೆಗೆ ಘಟನೆ ನಡೆದಿದೆ. ಅಭಿರಾಮಿ ತಾಯಿ ಲೀನಾ, ನೆರೆ ಮನೆಯೊಂದಕ್ಕೆ ತೆರಳಿದ್ದರು. ವಾಪಸ್ಸು ಬರುವಾಗ ಹೊರಗಡೆ ನಿಂತಿದ್ದ ಉಮೇಶ್​ ಬಾಬು ತನ್ನ ಮೊಬೈಲ್​ನಲ್ಲಿ ಲೀನಾರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಇದನ್ನು ನೋಡಿ ಆಕೆ ಪ್ರಶ್ನಿಸಿದ್ದಾಳೆ. ಮರು ಮಾತಾಡದೆ ಆರೋಪಿ ಉಮೇಶ್​, ಲೀನಾರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ.

ಭಯದಿಂದ ಲೀನಾ ತಕ್ಷಣ ಮಗಳು ಅಭಿರಾಮಿನ್ನು ಸಹಾಯಕ್ಕೆ ಕರೆದಿದ್ದಾಳೆ. ತಾಯಿಯನ್ನು ರಕ್ಷಿಸಲು ಮಗಳು ಓಡೋಡಿ ಬಂದಾಗ ಉಮೇಶ್​ ಚಾಕುವಿನಿಂದ ಆಕೆಯ ಮೇಲೂ ದಾಳಿ ಮಾಡಿ ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ಇತ್ತ ಅಭಿರಾಮಿ ಅಳುವುದನ್ನು ಕೇಳಿ ತಕ್ಷಣ ಹೊರಬಂದ ಸ್ಥಳೀಯರ ಮೇಲೆಯೂ ಉಮೇಶ್​ ಹಾಗೂ ಆತನ ಪತ್ನಿ ಕಲ್ಲುಗಳನ್ನು ಎಸೆದಾಡಿದ್ದಾರೆ. ಆದಾಗ್ಯೂ ಅಭಿರಾಮಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ತಾಯಿ ಲೀನಾಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಉಮೇಶ್​ ಮತ್ತು ಲೀನಾರ ಕುಟುಂಬ ಎದುರುಬದುರು ಮನೆಯಲ್ಲಿ ವಾಸಿಸುತ್ತಿವೆ. ನಡುವೆ ಒಂದು ರಸ್ತೆ ಇದ್ದು, ಉಮೇಶ್​ ಮನೆಯಿಂದ ಬರುವ ಚರಂಡಿ ನೀರು ರಸ್ತೆ ಮೇಲೆ ಹರಿದು ಅಭಿರಾಮಿ ಮನೆ ಆವರಣಕ್ಕೆ ಹೋಗುತ್ತಿತ್ತಂತೆ. ಇದೇ ವಿಚಾರಕ್ಕೆ ಹಲವು ಬಾರಿ ಜಗಳವೂ ನಡೆದಿದೆ ಎಂದು ಸ್ಥಳೀಯರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಉಮೇಶ್​ ಮಾತ್ರವಲ್ಲದೆ ಆತನ ಪತ್ನಿ ಶಾಕುಂತಲಾ ಮತ್ತು ಮಗಳು ಸೌಮ್ಯ (20)ಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net