

Kenishaa Francis: ಕಾಲಿವುಡ್ ಸ್ಟಾರ್ ಹೀರೋ, ನಟ ಜಯಂ ರವಿ (ರವಿ ಮೋಹನ್) ಮತ್ತು ಅವರ ಪತ್ನಿ ಆರತಿ ರವಿ ನಡುವಿನ ವಿಚ್ಛೇದನ ಪ್ರಕರಣ ಇದೀಗ ತಮಿಳು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. 2009ರಲ್ಲಿ ವಿವಾಹವಾದ ಈ ದಂಪತಿ 18 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಲು ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಸ್ತುತ ಇಬ್ಬರ ನಡುವಿನ ವಿಚ್ಛೇದನ ಅರ್ಜಿ ಇನ್ನೂ ವಿಚಾರಣೆಯಲ್ಲಿದೆ. ಈ ಮಧ್ಯೆ ದೊಡ್ಡ ವಿವಾದವೇ ಸೃಷ್ಟಿಯಾಗಿದ್ದು, ರವಿ ಪತ್ನಿ ಆರತಿ ಮತ್ತು ಗಾಯಕಿ ಕೆನಿಶಾ ನಡುವೆ ಪರೋಕ್ಷ ಕಿಚ್ಚು ಭುಗಿಲೆದ್ದಿದೆ.
ಕಳೆದ ಕೆಲವು ದಿನಗಳ ಹಿಂದೆ ಕೆನಿಶಾ ವಿರುದ್ಧ ಪರೋಕ್ಷ ಆರೋಪ ಮಾಡಿದ ಜಯಂ ರವಿ ಪತ್ನಿ ಆರತಿ, ನಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾಗಿದೆ ಎಂಬ ಮಾತನ್ನಾಡಿದ್ದರು. ಆರತಿಯಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆ ನೆಟ್ಟಿಗರು, ಗಾಯಕಿ ಕೆನಿಶಾ ಕುರಿತು ವ್ಯಾಪಕ ಟೀಕೆ, ಟ್ರೋಲ್ಗಳನ್ನು ಹರಿಸಿದರು. ಗಂಡ-ಹೆಂಡತಿ ಮಧ್ಯೆ ನೀನು ಪ್ರವೇಶಿಸಿದ್ದೇಕೆ? ಸಂಸಾರ ಒಡೆದವಳು ಎಂಬ ಸರಣಿ ಆರೋಪಗಳನ್ನು ಮಾಡಿದ್ದರು. ಇದರಿಂದ ತೀರ ಮನನೊಂದ ಕೆನಿಶಾ, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತನಗೆ ಬಂದ ಜೀವ ಬೆದರಿಕೆ ಕರೆಗಳು, ಸಂದೇಶಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡು, ಸತ್ಯ ಹೊರಬರುವವರೆಗೂ ನೆಮ್ಮದಿಯಿಂದ ಬದುಕಲು ಬಿಡಿ ಎಂದು ಮನವಿ ಮಾಡಿದ್ದರು. ಹೀಗೆ ಹೇಳಿ ಒಂದು ದಿನ ಕಳೆಯುತ್ತಿದ್ದಂತೆ ಇದೀಗ ಕಾನೂನು ಮೂಲಕ ಕಿಡಿಗೇಡಿಗಳಿಗೆ ಬುದ್ಧಿ ಕಲಿಸಲು ಸಜ್ಜಾಗಿದ್ದಾರೆ.
ನೆಮ್ಮದಿಯಿಂದ ಬದುಕಲು ಬಿಡಿ ಎಂದಿದ್ದ ಕೆನಿಶಾ ಇದೀಗ ತನ್ನ ವಿರುದ್ಧ ಕೇಳಿಬಂದ ಆರೋಪಗಳು, ಸುಳ್ಳು ಸುದ್ದಿಗಳನ್ನು ಹರಡುವವರು ಹಾಗೂ ಮಾನ ಹಾನಿ ಮಾಡುವವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಅಸಹ್ಯಕರ ಸಂದೇಶಗಳು, ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೆನಿಶಾ, ಕಿಡಿಗೇಡಿಗಳು ಕೂಡಲೇ ತನ್ನ ವಿರುದ್ಧ ನಕಲಿ ಸುದ್ದಿಗಳು, ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಕಾನೂನು ಪರಿಣಾಮಗಳನ್ನು ಎದುರಿಸಲು ಸಜ್ಜಾಗಿ ಎಂಬ ಎಚ್ಚರಿಕೆಯನ್ನು ತಮ್ಮ ತಂಡದ ಮೂಲಕ ರವಾನಿಸಿದ್ದಾರೆ,(ಏಜೆನ್ಸೀಸ್).