ಸುಮನಹಳ್ಳಿಯಲ್ಲಿ 5 ಎಕರೆಯಲ್ಲಿ ಕೆಂಪೇಗೌಡ ಭವನ ನಿರ್ಮಾಣ

dks
Published on

ಬೆಂಗಳೂರು: ಯುವ ಪೀಳಿಗೆಗೆ ನಾಡಪ್ರಭು ಕೆಂಪೇಗೌಡರ ಬಗ್ಗೆ ತಿಳಿಸುವ ಸಲುವಾಗಿ ಅವರ ಇತಿಹಾಸವನ್ನು ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ಕೆಂಪೇಗೌಡರ 516ನೇ ಜಯಂತಿಯನ್ನು ಜೂನ್ 27ರಂದು ಅದ್ಧೂರಿಯಾಗಿ ಆಚರಿಸುವ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆಗೆ ಡಿಸಿಎಂ ಪೂರ್ವಭಾವಿ ಸಭೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಶಾಲಾ ಪಠ್ಯಕ್ರಮದಲ್ಲಿ ಕೆಂಪೇಗೌಡರ ಕುರಿತ ಪಾಠವನ್ನು ಸೇರಿಸುವ ಬಗ್ಗೆ ಪ್ರಾಥಮಿಕ ಶಿಕ್ಷಣ ಸಚಿವರ ಜತೆ ಚರ್ಚೆ ಮಾಡಲಾಗುವುದು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಮನಹಳ್ಳಿ ಬಳಿ 5 ಎಕರೆ ಜಾಗವನ್ನು ನಿಗದಿ ಮಾಡಿದ್ದು, ಜೂ.27ರಂದು ಭೂಮಿಪೂಜೆ ಮಾಡಲು ತೀರ್ಮಾನಿಸಿದ್ದೇವೆ. ಈ ಕಟ್ಟಡದ ವಾಸ್ತುಶಿಲ್ಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಕೆಂಪೇಗೌಡರ ಗೋಪುರಗಳಿಂದ ಜ್ಯೋತಿ ಬರಲಿದ್ದು, ಪ್ರತಿ ಗೋಪುರಕ್ಕೂ ಒಬ್ಬರು ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. 27ರ ಬೆಳಗ್ಗೆ ಬಾಬು ಜಗಜೀವನ್ ರಾಮ್ ಭವನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಆಚರಿಸಲಾಗುವುದು. ಸಂಜೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರಲಿದೆ. ಪ್ರತಿ ತಾಲೂಕು ಮಟ್ಟದಲ್ಲಿ ಆಚರಣೆ ಮಾಡಲು ತಲಾ 1 ಲಕ್ಷ ರೂ. ನೀಡಲಾಗುತ್ತದೆ. ವಾರ್ಡ್ ಮಟ್ಟಕ್ಕೆ ಸೀಮಿತಗೊಳಿಸದೆ ರಾಜ್ಯೋತ್ಸವ ಪ್ರಶಸ್ತಿಯಂತೆ ಕ್ರೀಡೆ, ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಕೈಗಾರಿಕೆ, ಪರಿಸರ ಸಂರಕ್ಷಣೆ ಸೇರಿ ಎಲ್ಲ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲು ಚಿಂತನೆ ಮಾಡುತ್ತಿದ್ದೇವೆ. ಇದಕ್ಕೆ ಮಾರ್ಗಸೂಚಿ ನಿಗದಿ ಮಾಡಿ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.

ಕೆಂಪೇಗೌಡ ಪ್ರಾಧಿಕಾರ ವತಿಯಿಂದ ಮೈಸೂರು ದಸರಾಕ್ಕೆ ಪ್ರತಿ ವರ್ಷ ಒಂದು ಸ್ಥಬ್ಧಚಿತ್ರ ಕಳಿಸುವ ಕೆಲಸ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಂಪೇಗೌಡ ಜಯಂತಿ ಆಚರಿಸಲು ಆರ್ಥಿಕ ನೆರವು ನೀಡಲಾಗುವುದು. ಶಾಲೆಗಳಲ್ಲಿ ಮಕ್ಕಳ ಚರ್ಚಾಸ್ಪರ್ಧೆ ಏರ್ಪಡಿಸಿ ಬೆಂಗಳೂರು ಮತ್ತು ಕೆಂಪೇಗೌಡರ ಇತಿಹಾಸದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಶಿವಕುಮಾರ್ ಮಾಹಿತಿ ನೀಡಿದರು.

ದೆಹಲಿ ಸಿಎಂ, ಪ್ರಧಾನಿಗೆ ಪತ್ರ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಪ್ರತಿಮೆ ಬಳಿ ಥೀಮ್ ಪಾರ್ಕ್ ನಿರ್ಮಾಣ ಆಗುವುದೇ ಎಂಬ ಪ್ರಶ್ನೆಗೆ, ಬಿಜೆಪಿ ಕಾಲದಲ್ಲಿ ಒಂದು ಪ್ರತಿಮೆ ನಿಲ್ಲಿಸಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ಮಾಡಿದರು. ಗುತ್ತಿಗೆದಾರರಿಗೆ ಬಿಲ್ ನೀಡಲಿಲ್ಲ. ಸುತ್ತಮುತ್ತಲ ಪ್ರದೇಶ ಅಭಿವೃದ್ಧಿ ಮಾಡಿಲ್ಲ. ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡಗೆ ಜವಾಬ್ದಾರಿ ನೀಡಲಾಗಿದೆ ಎಂದು ಡಿಸಿಎಂ ಉತ್ತರಿಸಿದರು. ದೆಹಲಿಯಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಬಗ್ಗೆ ಕೇಳಿದಾಗ, ಇದಕ್ಕೆ ದೆಹಲಿ ಸಿಎಂ ಮತ್ತು ಪ್ರಧಾನಿಗೆ ಪತ್ರ ಬರೆಯಬೇಕು. ಈ ಬಗ್ಗೆ ಸಂಸದರಿಗೆ ಮನವಿ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net