

ಶಿವಮೊಗ್ಗ: ಅಡಕೆ ಬೆಳೆಗಾರರಿಗೆ ರೈತ ಉತ್ಪಾದಕ ಕಂಪನಿಯ ಮೂಲಕ ಉತ್ತಮ ಬೆಂಬಲ ಬೆಲೆ ಸಿಗುತ್ತದೆ. ಇದರ ಜತೆಯಲ್ಲಿ ಅಡಕೆ ದಲ್ಲಾಳಿಗಳಿಂದ ರೈತರಿಗೆ ಆಗುವ ಶೋಷಣೆ ತಪ್ಪಿಸಬಹುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಧರ್ಮಪಾಲ್ ಸತ್ಯಪಾಲ್ ಗ್ರೂಪ್ಸ್ ಸಹಯೋಗದಲ್ಲಿ ಜೀವನೋಪಾಯದ ವರ್ಧನೆಗಾಗಿ ಸುಸ್ಥಿರ ಮತ್ತು ಸಮಗ್ರ ಕೃಷಿ ಯೋಜನೆಯಡಿ ಅಡಕೆ ಉತ್ಪಾದನೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹಾಗೂ ಕೀಟ ರೋಗಗಳ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ಉತ್ಪಾದಕರ ಕಂಪನಿ ಮೂಲಕ ಮುಂದಿನ ದಿನಗಳಲ್ಲಿ ರೈತರಿಂದ ಗುಣಮಟ್ಟದ ಉತ್ಪಾದಕತೆ ಹೆಚ್ಚುವ ಜತೆಯಲ್ಲಿ ಉತ್ತಮ ಬೆಲೆ ಸಿಗುವ ಅವಕಾಶ ನಿರ್ಮಾಣವಾಗುತ್ತದೆ. ರೈತರ ಅಭಿವೃದ್ಧಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಕೃಷಿ ಆದಾಯ ದ್ವಿಗುಣಗೊಳಿಸುವ ಕ್ರಮಗಳನ್ನು ರೈತರು ಅನುಸರಿಸಬೇಕು ಎಂದರು.
ವಿವಿಯಿಂದ ರೈತ ಜಾಗೃತಿ ವಿಚಾರ ಸಂಕಿರಣಗಳು ನಿರಂತರವಾಗಿ ನಡೆಯುತ್ತವೆ. ರೈತರು ಸದುಪಯೋಗಪಡಿಸಿಕೊಳ್ಳುವ ಜತೆಯಲ್ಲಿ ಗುಣಮಟ್ಟದ ಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಅಡಕೆ ಜತೆ ಉಪಬೆಳೆ ಅಥವಾ ಮಿಶ್ರಬೆಳೆ ಬೆಳೆಯುವುದರ ಜತೆಗೆ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದರು.
ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಿಇಒ ಬಿ.ಟಿ.ಭದ್ರೀಶ್ ಮಾತನಾಡಿ, ಧರ್ಮಪಾಲ್ ಸತ್ಯಪಾಲ್ ಗ್ರೂಪ್ಸ್ ಸಂಸ್ಥೆಯವರು ಸಿಎಸ್‌ಆರ್‌ನಡಿ ಕಾರ್ಯಕ್ರಮ ಆಯೋಜಿಸಿದ್ದು, ಮಲೆನಾಡು ಪ್ರದೇಶದಿಂದ ಗುಣಮಟ್ಟದ ಅಡಕೆ ಖರೀರಿಸುವ ಜತೆಯಲ್ಲಿ ರೈತರೊಂದಿಗೆ ಚರ್ಚಿಸಿ ಅಡಕೆ ಬೆಳೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಅಡಕೆ ಬೆಳೆಗಾರರು ಸೇರಿ ರೈತರು, ಸಾರ್ವಜನಿಕರು ಹಾಗೂ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಉಪಯುಕ್ತ ತರಬೇತಿ ಕಾರ್ಯಾಗಾರಗಳನ್ನು ಚೈತನ್ಯ ಸಂಸ್ಥೆ ನಿರಂತರವಾಗಿ ಆಯೋಜಿಸುತ್ತಿದೆ. ವಿವಿಧ ಯೋಜನೆಗಳ ಬಗ್ಗೆ ಎಲ್ಲ ತಾಲೂಕಿನ ರೈತರಿಗೂ ತರಬೇತಿ ನೀಡಲಾಗುತ್ತಿದೆ. ಅಡಕೆ ಬೆಳೆಗಾರರು ಅಡಕೆ ಉತ್ಪಾದನೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹಾಗೂ ಬೆಳೆಯಲ್ಲಿ ಬರುವ ಕೀಟ ಮತ್ತು ರೋಗಗಳ ಬಗ್ಗೆ ತಿಳವಳಿಕೆ ಹೊಂದಬೇಕು ಎಂದು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ. ಕೆ.ಸಿ.ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಯುಎಎಲ್ ತಾಂತ್ರಿಕ ಅಧಿಕಾರಿ ನಾಗರಾಜ ಹೆಗಡೆ ಅವರು ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರದ ಮಹತ್ವ ಹಾಗೂ ರಾಸಾಯನಿಕ ಮುಕ್ತ ಅಡಕೆ ಬೆಳೆಯಲ್ಲಿ ಹೆಚ್ಚಿನ ಉತ್ಪಾದನೆ ಮತ್ತು ಉತ್ತಮ ಗುಣಮಟ್ಟ ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಅಡಕೆ ಸಂಶೋಧನಾ ಕೇಂದ್ರ ಮುಖ್ಯಸ್ಥರು ಡಾ. ಎಚ್.ನಾರಾಯಣಸ್ವಾಮಿ, ತೋಟಗಾರಿಕಾ ಅಧಿಕಾರಿ ಪಿ.ಅಮೃತಾ, ಕೌಶಿಕ್, ವಿಕಾಸ್, ರೈತ ಉತ್ಪಾದಕ ಕಂಪನಿ ನೌಕರರಾದ ಟಿ.ಡಿ.ಸೋಮಶೇಖರ್, ಗಾಯತ್ರಿ, ವೈ.ಕೃಷ್ಣಮೂರ್ತಿ, ಎಂ.ಪ್ರಭಾಕರ, ರಂಜಿತಾ ಹಾಗೂ ಅಂಬಿಕಾ ಉಪಸ್ಥಿತರಿದ್ದರು.