

ನವದೆಹಲಿ: ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಯನ್ನು ಖಂಡಿಸಿ ಮಾತನಾಡದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಚಿಕೆಯಿಲ್ಲದೇ ಆರೋಪಿ ಬಿಭವ್ ಕುಮಾರ್ ಅವರೊಂದಿಗೆ ತಿರುಗಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ವಿರುದ್ಧ ನಿರ್ಮಲಾ ಕಿಡಿಕಾರಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮನ್ ಅವರು, ಎಎಪಿ ಸಂಚಾಲಕರು ಈ ವಿಷಯದ ಬಗ್ಗೆ ಮಾತನಾಡಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ನವದೆಹಲಿ ಲೋಕಸಭಾ ಅಭ್ಯರ್ಥಿ ಸೋಮನಾಥ್ ಭಾರ್ತಿ ಸೇರಿದಂತೆ ಹಲವು ಎಎಪಿ ನಾಯಕರ ವಿರುದ್ಧ ಮಹಿಳೆಯರ ಮೇಲಿನ ಹಲ್ಲೆಯ ಆರೋಪಗಳಿವೆ. ಎಎಪಿ ಮಹಿಳಾ ವಿರೋಧಿ ಪಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಎಪಿ ಸಂಸದ ಸಂಜಯ್ ಸಿಂಗ್ ಮಲಿವಾಲ್ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಒಂದು ದಿನದ ನಂತರ, ಆರೋಪಿ ಬಿಭವ್ ಕುಮಾರ್ ಅವರು ಲಕ್ನೋದಲ್ಲಿ ಕೇಜ್ರಿವಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಕೇಜ್ರಿವಾಲ್ ತಮ್ಮ ಪಕ್ಷದ ಮಹಿಳಾ ಸಂಸದರ ಮೇಲಿನ ಹಲ್ಲೆ ಕುರಿತು ಒಂದು ಮಾತನ್ನೂ ಮಾತನಾಡದಿರುವುದು ನಂಬಲಾಗದ ಮತ್ತು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ಅವರ ವೈಯಕ್ತಿಕ ಸಿಬ್ಬಂದಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ಆರೋಪಿಸಿದ್ದಾರೆ. ದೆಹಲಿ ಪೊಲೀಸರು ಗುರುವಾರ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಪ್ರಕರಣದಲ್ಲಿ ಕುಮಾರ್ ಅವರನ್ನು ಆರೋಪಿ ಎಂದು ಹೆಸರಿಸಿದ್ದಾರೆ.