

ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದ ಇದಾಗಲೇ ಹಲವಾರು ಘೋಷಣೆಗಳನ್ನು ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಘೋಷಣೆಗೆ ಇನ್ನೊಂದು ಸೇರ್ಪಡೆ ಮಾಡಿದ್ದಾರೆ.
ಕರೊನಾ ವೈರಸ್‌ನ ಬಿಕ್ಕಟ್ಟಿನ ಈ ದಿನಗಳಲ್ಲಿ ಜನರು ಹೊರಗಡೆ ಬರುವುದಕ್ಕೆ ಭಯ ಪಡುತ್ತಿರುವ ಹಿನ್ನೆಲೆಯಲ್ಲಿ ಮನೆಮನೆಗೆ ರೇಷನ್ ಪೂರೈಕೆ ಮಾಡುವುದಾಗಿ ಅವರು ಘೋಷಿಸಿದ್ದು, ಅದಕ್ಕೆ ಸಚಿವ ಸಂಪುಟದಲ್ಲಿ ಕೂಡ ಅನುಮೋದನೆ ದೊರೆತಿದೆ.
ಇನ್ನು ಆರೇಳು ತಿಂಗಳಿನಲ್ಲಿ ಈ ಕಾರ್ಯವನ್ನು ಆರಂಭಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಂಡ ಬಳಿಕ ಮಾಧ್ಯಮಗಳ ಜತೆ ಮಾತನಾಡಿರುವ ಮುಖ್ಯಮಂತ್ರಿ, ‘ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಬಡವರಿಗೆ ಗೌರವಯುತವಾಗಿ ಪಡಿತರ ನೀಡುವುದು ನಮ್ಮ ಬಹು ದಿನಗಳ ಕನಸಾಗಿತ್ತು. ಇಂದು ನಾವು ಕಂಡ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಆರೇಳು ತಿಂಗಳಿನಲ್ಲಿ ಈ ಕಾರ್ಯ ಆರಂಭ ಮಾಡಲಾಗುವುದು’ ಎಂದಿದ್ದಾರೆ.
ಕೇಂದ್ರ ಸರ್ಕಾರ ‘ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್’ ಸಹ ಅನ್ವಯಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಮುಂದಿನ ಏಳೆಂಟು ತಿಂಗಳಲ್ಲಿ ಫಲಾನಭವಿಗಳಿಗೆ ಮನೆಯ ಬಾಗಿಲಿಗೆ ರೇಷನ್ ತಲುಪಲಿದೆ. ಫಲಾನುಭವಿ ಬೇಕಾದಲ್ಲಿ ಅಂಗಡಿಗಳಿಗೆ ತೆರಳಿ ತಮ್ಮ ಪಡಿತರವನ್ನು ತೆಗೆದುಕೊಳ್ಳಬಹುದು. ಗೋಧಿ ಬದಲಾಗಿ ಹಿಟ್ಟು ನೀಡಲಾಗುತ್ತದೆ. ಉಳಿದಂತೆ ಗೋಧಿ, ಸಕ್ಕರೆ ಮತ್ತು ಅಕ್ಕಿಯನ್ನು ಪ್ಯಾಕ್ ಮೂಲಕ ಮನೆಗೆ ತಲುಪಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದರು.
ಇಡೀ ದೆಹಲಿಗೆ ವೈಫೈ ಸೇವೆ ಒದಗಿಸುವುದು ಸೇರಿದಂತೆ ಇದಾಗಲೇ ಹಲವಾರು ಘೋಷಣೆಗಳನ್ನು ಮಾಡಿ ಅದನ್ನು ಜಾರಿಗೆ ಮಾಡದೇ ಟೀಕೆಗೆ ಒಳಗಾಗಿರುವ ಕೇಜ್ರಿವಾಲ್ ಅವರು, ಈ ಯೋಜನೆಯನ್ನು ಕಾರ್ಯಗತ ಮಾಡಿದರೆ ಸಾಕು ಎನ್ನುತ್ತಿದೆ ದೆಹಲಿ ಜನತೆ.