ಪ್ರಮಾಣವಚನ ಸ್ವೀಕಾರಕ್ಕೂ ಮೊದಲು ಸಚಿವರಿಗೆಲ್ಲ ಔತಣಕೂಟಕ್ಕೆ ಆಮಂತ್ರಣ ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​...ಕಾರಣವೇನಂತೆ ಗೊತ್ತಾ?

Aravind 15 Feb 20
Published on

ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಹಿಡಿಯುತ್ತಿರುವ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಂಪುಟದ ಸಚಿವರನ್ನು ಔತಣಕೂಟಕ್ಕೆ ಆಮಂತ್ರಿಸಿದ್ದಾರೆ.

ಅರವಿಂದ್​ ಕೇಜ್ರಿವಾಲ್​ ಅವರು ನಾಳೆ ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು ಅದಕ್ಕೂ ಮೊದಲು ಸಚಿವರೊಟ್ಟಿಗೆ ದೆಹಲಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಚರ್ಚಿಸಲು ಔತಣಕೂಟ ಏರ್ಪಡಿಸಿದ್ದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಮುಂದಿನ ಮೂರು ತಿಂಗಳಲ್ಲಿ ದೆಹಲಿ ಸರ್ಕಾರದ ಪ್ರಥಮ ಆದ್ಯತೆಗಳೇನಾಗಬೇಕು, ಅಭಿವೃದ್ಧಿ ದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸಚಿವರೊಂದಿಗೆ ಅರವಿಂದ್ ಕೇಜ್ರಿವಾಲ್​ ಚರ್ಚಿಸಲಿದ್ದಾರೆ. ಅಲ್ಲದೆ ದೆಹಲಿಯನ್ನು ಜಾಗತಿಕ ನಗರವನ್ನಾಗಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ತಯಾರಿಸುವ ಬಗ್ಗೆಯೂ ಈ ಔತಣಕೂಟದ ವೇಳೆ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.

ಈ ಬಾರಿಯ ದೆಹಲಿ ವಿಧಾನಸಭೆಯಲ್ಲಿ ಗೆಲ್ಲುವ ಆಸೆ ಹೊಂದಿದ್ದ ಬಿಜೆಪಿಗೆ ಆಪ್​ ನಿರಾಸೆಯನ್ನೇ ಕೊಟ್ಟಿದೆ. 62 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೆಹಲಿಯನ್ನು ಮತ್ತೆ ತನ್ನ ತೆಕ್ಕೆಗೇ ಎಳೆದುಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net