2 ಲಕ್ಷ ಐಸಿಯು ಬೆಡ್ ಸಿದ್ಧಪಡಿಸಿಕೊಳ್ಳಿ; ಸಂಭಾವ್ಯ 3ನೇ ಅಲೆ ಎದುರಿಸಲು ನೀತಿ ಆಯೋಗ ಸಲಹೆ

Corona
Published on

ನವದೆಹಲಿ: ದೇಶದಲ್ಲಿ ಕರೊನಾ ಸಾಂಕ್ರಾಮಿಕದ ಮೂರನೇ ಅಲೆ ಶುರುವಾದರೆ ಪ್ರತಿ ನೂರು ಪಾಸಿಟಿವ್ ಕೇಸ್​ಗಳಲ್ಲಿ ಶೇ. 23 ರೋಗಿಗಳು ಆಸ್ಪತ್ರೆಗೆ ದಾಖಲಾಗಬೇಕಾಗಬಹುದು. ಆದ್ದರಿಂದ ಸೆಪ್ಟೆಂಬರ್ ಹೊತ್ತಿಗೆ ದೇಶಾದ್ಯಂತ ತೀವ್ರ ನಿಗಾ ಘಟಕದಲ್ಲಿ (ಐಸಿಯು) 2 ಲಕ್ಷ ಬೆಡ್​ಗಳು ಸಿದ್ಧವಾಗಿರಬೇಕು. ಈ ಪೈಕಿ 1.20 ಲಕ್ಷ ಬೆಡ್​ಗಳಿಗೆ ವೆಂಟಿಲೇಷನ್ (ಕೃತಕ ಉಸಿರಾಟದ ಸಾಧನ) ವ್ಯವಸ್ಥೆ ಅಗತ್ಯವಾಗಬಹುದು ಎಂದು ನೀತಿ ಆಯೋಗ ಅಂದಾಜಿಸಿದೆ. ಐಸಿಯು ಹೊರತಾಗಿ 7 ಲಕ್ಷ ಬೆಡ್​ಗಳು ಕರೊನಾ ಸೋಂಕಿತರಿಗೆ ಬೇಕಾಗಬಹುದು. ಇದರಲ್ಲಿ ಕನಿಷ್ಠ ಐದು ಲಕ್ಷ ಬೆಡ್​ಗಳಿಗೆ ಆಕ್ಸಿಜನ್ ಸಿಲಿಂಡರ್​ಗಳ ಅಗತ್ಯ ಬೀಳಬಹುದು. ಕೋವಿಡ್ ಐಸೋಲೇಷನ್ ಕೇಂದ್ರಗಳಲ್ಲಿ 10 ಲಕ್ಷ ಹಾಸಿಗೆಗಳನ್ನು ಸಿದ್ಧವಾಗಿರಿಸುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದೆ.

ಎರಡನೇ ಅಲೆಯಲ್ಲಿ ಶೇ. 20 ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಬಹುದು ಎಂದು ಹೇಳಲಾಗಿತ್ತು. ಆದರೆ, ಇದಕ್ಕೂ ಮೀರಿ ಸೋಂಕು ಪಸರಿಸಿದ ಕಾರಣ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಿತ್ತು. ಜೂನ್ 1ರ ಕರೊನಾ ಕೇಸ್ ವರದಿಯಂತೆ 10 ರಾಜ್ಯಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇದ್ದವು. ಈ ಪೈಕಿ ಶೇ. 21.74 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಪರಿಸ್ಥಿತಿ ಇತ್ತು. ಇದರಲ್ಲಿ ಶೇ. 2.2 ರೋಗಿಗಳಿಗೆ ಐಸಿಯುವಿನಲ್ಲೇ ಚಿಕಿತ್ಸೆ ನೀಡಬೇಕಾಯಿತು.

31 ಸಾವಿರದೊಳಗೆ ದೈನಿಕ ಕೇಸ್

ದೇಶದಲ್ಲಿ ಭಾನುವಾರ 30,948 ಹೊಸ ಪ್ರಕರಣಗಳು ಪತ್ತೆಯಾಗಿವೆ. ಶನಿವಾರದ ಸಂಖ್ಯೆಗೆ ಹೋಲಿಸಿದರೆ ಶೇ. 10.18 ಇಳಿಕೆ ಕಂಡಿದೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ 3.24 ಕೋಟಿಗೂ ಹೆಚ್ಚಿದೆ. ಕೇರಳದಲ್ಲಿ 17,106 ಪ್ರಕರಣಗಳು ಬೆಳಕಿಗೆ ಬಂದಿದ್ದು, ದೇಶದ ದೈನಿಕ ಕೇಸ್​ಗಳಲ್ಲಿ ಅರ್ಧದಷ್ಟು ಈ ರಾಜ್ಯದಲ್ಲಿ ಕಂಡು ಬಂದಿದೆ. ದೈನಿಕ ಸಾವಿನ ಪ್ರಕರಣ 403 ಇದ್ದು, ಒಟ್ಟಾರೆ ಮೃತರ ಸಂಖ್ಯೆ 4.34 ಲಕ್ಷಕ್ಕೂ ತುಸು ಹೆಚ್ಚಿದೆ. ಭಾನುವಾರದ ಸಂಜೆಯ ಹೊತ್ತಿಗೆ ಲಸಿಕೆ ಪಡೆದವರ ಒಟ್ಟಾರೆ ಸಂಖ್ಯೆ 58.44 ಕೋಟಿಗೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ನಿತ್ಯದ ಪಾಸಿಟಿವಿಟಿ ದರ ಶೇ.1.95 ಇದ್ದು, ಕಳೆದ 27 ದಿನಗಳಿಂದ ಈ ಪ್ರಮಾಣ ಶೇ. 3ಕ್ಕಿಂತ ಕೆಳಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,53, 398 (ಶೇ. 1.09) ಇದ್ದು, 152 ದಿನಗಳಲ್ಲೇ ಕಡಿಮೆ ಪ್ರಮಾಣದ್ದಾಗಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 97.57 ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net