ಮನೆಯ ಸುತ್ತಲೂ ಸ್ವಚ್ಛತೆಯಿರಲಿ

ಸರಗೂರು ಪಟ್ಟಣದಲ್ಲಿ ಡೆಂಘೆ ತಡೆ ಜಾಗೃತಿ ಜಾಥಾಗೆ ಟಿಎಚ್‌ಒ ರವಿಕುಮಾರ್, ಪಪಂ ಮುಖ್ಯಾಧಿಕಾರಿ ಮಂಜುನಾಥ್ ಚಾಲನೆ ನೀಡಿದರು. ಸರಳಾ, ನಾಗೇಂದ್ರ, ರವಿರಾಜ್, ಮಾನಸ, ಮಂಜುಳಾ, ಶಾಂತಿ, ಪುಷ್ಪಾ ಮತ್ತಿತರರಿದ್ದರು.
ಸರಗೂರು ಪಟ್ಟಣದಲ್ಲಿ ಡೆಂಘೆ ತಡೆ ಜಾಗೃತಿ ಜಾಥಾಗೆ ಟಿಎಚ್‌ಒ ರವಿಕುಮಾರ್, ಪಪಂ ಮುಖ್ಯಾಧಿಕಾರಿ ಮಂಜುನಾಥ್ ಚಾಲನೆ ನೀಡಿದರು. ಸರಳಾ, ನಾಗೇಂದ್ರ, ರವಿರಾಜ್, ಮಾನಸ, ಮಂಜುಳಾ, ಶಾಂತಿ, ಪುಷ್ಪಾ ಮತ್ತಿತರರಿದ್ದರು.
Published on

ಸರಗೂರು: ಜನರು ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆ ಪಡೆಯಬೇಕು. ಈ ನಿಟ್ಟಿನಲ್ಲಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಸಲಹೆ ನೀಡಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಚೇರಿ ಮುಂಭಾಗ ಸೋಮವಾರ ರಾಷ್ಟ್ರೀಯ ಡೆಂಘೆ ನಿಯಂತ್ರಣ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಡೆಂಘೆ ತಡೆ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಡೆಂಘೆ ಜ್ವರ ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಜನಜಾಗೃತಿಗಾಗಿ ಜಾಥಾ ಏರ್ಪಡಿಸಲಾಗಿದೆ. ಆರೋಗ್ಯ ಇಲಾಖೆಯ ಸಲಹೆ, ಸೂಚನೆಗಳು ಸಾರ್ವಜನಿಕರು ತಪ್ಪದೇ ಪಾಲಿಸಿ ಡೆಂಘೆ ತಡೆಗಟ್ಟಲು ಸಹಕರಿಸಬೇಕು ಎಂದು ಹೇಳಿದರು.

ಡೆಂಘೆ ಜ್ವರಕ್ಕೆ ಕಾರಣವಾಗಿ ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ನೀರು ಶೇಖರಣೆ ಆಗುವ ಯಾವುದೇ ಪ್ರದೇಶವಿದ್ದರೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರಮುಖವಾಗಿ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಲ್ಲದೆ ಸೊಳ್ಳೆ ನಿವಾರಕ ಕ್ರಮಗಳನ್ನು ಅನುಸರಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ಮಾತನಾಡಿ, ಆರೋಗ್ಯ ಇಲಾಖೆ, ಎನ್‌ಜಿಒಗಳ ಮೂಲಕ ಡೆಂಘೆ ರೋಗ, ಅದರ ಲಕ್ಷಣಗಳು, ಚಿಕಿತ್ಸಾ ವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬೇಸಿಗೆಯ ಕೊನೇ ಮತ್ತು ಮಳೆಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಡೆಂಘೆ ಪ್ರಕರಣಗಳು ವರದಿಯಾಗುತ್ತವೆ. ಹೀಗಾಗಿ ಈ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಸರಗೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಪಾರ್ಥಸಾರಥಿ, ಆರೋಗ್ಯ ಇಲಾಖೆ ಸಿಬ್ಬಂದಿ ಸರಳಾ, ನಾಗೇಂದ್ರ, ರವಿರಾಜ್, ಸುನೀಲ್, ಪುಷ್ಪಾ, ಶಾಂತಿ, ನಾಗೇಶ್, ಜಗದೀಶ್, ಗಿರೀಶ್, ಮಾನಸ, ಮಂಜುಳಾ, ಶ್ವೇತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net