

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬದಿಗಿಟ್ಟು, ಬಡವರು ಹಾಗೂ ದುಡಿಯುವ ವರ್ಗಗಳ ಮೇಲೆ ಹೇರಿರುವ ಕಠೋರ ನಿರ್ಧಾರ ಕೈಬಿಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಕ್ಷ ಹಮ್ಮಿಕೊಂಡಿರುವ ಚಳವಳಿಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ತೈಲ ಬೆಲೆ ಹೆಚ್ಚಳ ಜನ ವಿರೋಧಿ ಎಂದು ಬಿಜೆಪಿ ಖಂಡಿಸಿದರೆ, ಮಧ್ಯಪ್ರದೇಶ, ಮಹಾರಾಷ್ಟ್ರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ವ್ಯಾಟ್ ಕಡಿಮೆಯಿದೆ ಎಂದು ಹೇಳುವ ಮೂಲಕ ಜನರ ಕಷ್ಟವನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಬಿಜೆಪಿ ಸರ್ಕಾರವಿದ್ದಾಗ ಇದೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ವಿರುದ್ಧ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಹೋರಾಟ ಮಾಡಿದ್ದರು. ನಾವು ಅಧಿಕಾರದಲ್ಲಿದ್ದರೆ ಪ್ರತಿ ಲೀಟರ್ ಬೆಲೆ 10 ರೂ ಕಡಿಮೆ ಮಾಡುತ್ತಿದ್ದೆವು ಎಂದಿದ್ದರು.
ಪ್ರತಿಪಕ್ಷದಲ್ಲಿದ್ದಾಗ ಬಡವರ ಬಗೆಗಿನ ಕಾಳಜಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲಿ ಹೋಯಿತು ?. ತೈಲ ಬೆಲೆ ಏರಿಕೆಯಿಂದ ದಿನಸಿ, ಸಾರಿಗೆ, ಸಾಗಣೆ ಎಲ್ಲವೂ ದುಬಾರಿಯಾಗುತ್ತದೆ ಎಂದು ಪ್ರತಿಪಾದಿಸಿದ್ದರು. ಈಗ ಕಠಿಣ ನಿರ್ಧಾರ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು.
ಬಸವರಾಜ ಬೊಮ್ಮಾಯಿ ಅಧಿಕಾರದಿಂದ ಕೆಳಗೆ ಇಳಿಯುವಾಗ ರಾಜಸ್ವ ಉಳಿತಾಯ ಬಜೆಟ್ ಕೊಟ್ಟಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ರಾಜಸ್ವ ಕೊರತೆ ಬಜೆಟ್ ಕೊಟ್ಟು, ಸಾಲದ ಹೊರೆ ಹೆಚ್ಚಿಸಿದ್ದಾರೆ. ಮಿತಿ ಮೀರಿದ ಭ್ರಷ್ಟಾಚಾರ, ಅನುತ್ಪಾದಕ ವೆಚ್ಚ ಏರಿಕೆ, ಮುಂದಾಲೋಚನೆಯಿಲ್ಲದ ಯೋಜನೆಗಳಿಂದ ಆರ್ಥಿಕ ಸ್ಥಿತಿ ಅಧ್ವಾನ ಆಗಿದೆ ಎಂದು ಆರೋಪಿಸಿದರು.
ಮುದ್ದೇಬಿಹಾಳದ ಕಾಂಗ್ರೆಸ್ ಶಾಸಕ ಬಹಿರಂಗವಾಗಿ ತಮ್ಮ ಅಸಹಾಯಕತೆ ಹೊರ ಹಾಕಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ವರ್ಷವಾಯಿತು. ಕ್ಷೇತ್ರಕ್ಕೆ ನಯಾ ಪೈಸೆ ಅನುದಾನವಿಲ್ಲ. ಒಂದೇ ಒಂದು ಹೊಸ ಕಾಮಗಾರಿಗೆ ಚಾಲನೆ ನೀಡಲಾಗಿಲ್ಲ. ಯಾವ ಸಾಧನೆಗೆ ರಾಜಕೀಯದಲ್ಲಿರಬೇಕು ಎಂಬ ಬೇಸರ ಬಂದಿದೆ. ಕೇಳಿದರೆ ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂಬ ಹೇಳಿಕೆ ನೀಡಿದ್ದಾರೆ. ಇವರಷ್ಟೇ ಅಲ್ಲ, ಕಾಂಗ್ರೆಸ್ ನ ಅನೇಕ ಶಾಸಕರಲ್ಲಿ ಹತಾಶೆ ಮಡುಗಟ್ಟಿದೆ.
ರಾಜ್ಯದ ಖಜಾನೆ ಹೇಗಿದೆ ಎನ್ನುವುದಕ್ಕೆ ಶಾಸಕರಲ್ಲಿ ಹೆಚ್ಚುತ್ತಿರುವ ಅಸಹನೆಯೇ ನಿದರ್ಶನ. ರಾಜ್ಯ ಸರ್ಕಾರ ತೈಲ ಬೆಲೆ ಹಿಂಪಡೆಯುವ ತನಕ ಹೋರಾಟ ನಡೆಯಲಿದೆ. ಇದು, ಪ್ರತಿಪಕ್ಷ ಬಿಜೆಪಿ ಮಾತ್ರವಲ್ಲ, ಜೆಡಿಎಸ್, ಎಲ್ಲ ಸಂಘಟನೆಗಳು, ಜನರನ್ನು ಜತೆಗೆ ಕರೆದುಕೊಂಡು ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನಿಲುವು ಖಂಡಿಸಿ, ಬೆಲೆ ಏರಿಕೆ ವಾಪಸ್ ಪಡೆಯಲು ಒತ್ತಾಯಿಸಿ ಹೋರಾಟ ಮಾಡುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.