ಮೇ 4 ರಿಂದ ಕೇದಾರನಾಥ ದರ್ಶನಕ್ಕೆ ಅವಕಾಶ, ಹಸಿರು ವಲಯದ ಜಿಲ್ಲೆಗಳ ಭಕ್ತರು ಭೇಟಿ ನೀಡಬಹುದು

Kedarnath_Temple
Published on

ನವದೆಹಲಿ: ಚಾರ್​ಧಾಮ್​ಗಳಲ್ಲಿ ಒಂದಾದ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಲು ಮೇ 4ರಿಂದ ಅವಕಾಶ ಕಲ್ಪಿಸಲಾಗಿದೆ. ಉತ್ತರಾಖಂಡದ ಹಸಿರು ಜಿಲ್ಲೆಗಳಲ್ಲಿರುವ ಭಕ್ತರು ದೇಗುಲಕ್ಕೆ ತೆರಳಬಹುದು ಎಂದು ಸಿಎಂ ತ್ರಿವೇಂದ್ರ ಸಿಂಗ್​ ರಾವತ್​ ಹೇಳಿದ್ದಾರೆ.

ಉತ್ತರಾಖಂಡ್​ನಲ್ಲಿ ಹಸಿರು ವಲಯಗಳಲ್ಲಿರುವ ಜಿಲ್ಲೆಗಳಲ್ಲಿ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಮೇ 4ರಿಂದ ಮುಕ್ತಗೊಳಿಸಲಾಗಿದೆ. ಆದರೆ, ಎಲ್ಲ ಹಂತಗಳಲ್ಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅನಿವಾರ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಉತ್ತರಾಖಂಡ್​ನ 13 ಜಿಲ್ಲೆಗಳ 10 ಜಿಲ್ಲೆಗಳು ಹಸಿರು ವಲಯದಲ್ಲಿವೆ. ಎರಡು ಕಿತ್ತಳೆ ಹಾಗೂ ಒಂದು ಮಾತ್ರ ಕೆಂಪು ವಲಯದಲ್ಲಿದೆ.

ಭಕ್ತರು ಚಾರ್​ಧಾಮ್​ ಯಾತ್ರೆ ಕೈಗೊಳ್ಳಬೇಕು ಎಂಬುದು ರಾಜ್ಯದ ಆಶಯವೂ ಆಗಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಂತೆಲ್ಲ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ತ್ರಿವೇಂದ್ರ ಸಿಂಗ್​ ರಾವತ್​ ಹೇಳಿದರು.

ರಾಜ್ಯಕ್ಕೆ ಪ್ರವಾಸೋದ್ಯಮವು ಅತಿದೊಡ್ಡ ಆದಾಯ ಮೂಲವಾಗಿದೆ. ಕರೊನಾದಿಂದ ಸಾಕಷ್ಟು ತೊಂದರೆಯಾಗಿದೆ. ಚಳಿಗಾಲದಲ್ಲಿ ಪ್ರವಾಸಿಗರ ಭೇಟಿ ಅವಧಿಯನ್ನು ಹೆಚ್ಚಿಸುವ ಮೂಲಕ ಈ ಕ್ಷೇತ್ರದ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುವುದು ಎಂದು ರಾವತ್​ ಹೇಳಿದರು.

ಸದ್ಯ ಉತ್ತರಾಖಂಡದಲ್ಲಿ ಒಟ್ಟು 58 ಸೋಂಕಿತರಿದ್ದು, ಇವರಲ್ಲಿ 36 ಜನರು ಚೇತರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net