ನವದೆಹಲಿ: ಇಡೀ ಜಗತ್ತು ಈಗ ಕರೊನಾ ಲಸಿಕೆ ಹಿಂದೆ ಬಿದ್ದಿದೆ. ಹಲವೆಡೆ ಔಷಧಗಳ ಕ್ಲಿನಿಕಲ್ ಟ್ರಯಲ್ ಶುರುವಾಗಿದೆ. ಇನ್ನು ಹಲವೆಡೆ ಪರ್ಯಾಯ ಔಷಧಗಳನ್ನು ಕರೊನಾ ತಡೆಗೆ ಬಳಸಲಾಗುತ್ತಿದೆ.
ಕೆಲ ಕಂಪನಿಗಳಂತೂ ಸೆಪ್ಟೆಂಬರ್ ಅಂತ್ಯಕ್ಕೆ ಲಸಿಕೆ ಸಿದ್ಧವಾಗುವ ವಿಶ್ವಾಸ ವ್ಯಕ್ತಪಡಿಸಿವೆ. ಜತೆಗೆ, ಕರೊನಾದಿಂದ ಎಲ್ಲ ರಾಷ್ಟ್ರಗಳು ಪಾರಾಗುವ ಬಗೆ ಹೇಗೆ ಎಂಬುದು ಈ ಲಸಿಕೆಗಳ ಯಶಸ್ಸನ್ನೇ ಅವಲಂಬಿಸಿದೆ.
ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಲಾಕ್ಡೌನ್ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಅಂತಿಮವಾಗಿ ಔಷಧ ಬಳಸಿಯೇ ಇದರಿಂದ ಮುಕ್ತಿ ಪಡೆಯಬೇಕಾಗಿದೆ. ಎಲ್ಲ ರಾಷ್ಟ್ರಗಳ ಕರೊನಾ ‘ಎಕ್ಸಿಟ್ ಪ್ಲಾನ್’ ಈ ಲಸಿಕೆಯನ್ನೇ ಅವಲಂಬಿಸಿದೆ ಎಂಬುದಂತೂ ಸತ್ಯ.
ಇದಕ್ಕೊಂದು ಔಷಧವನ್ನಂತೂ ಕಂಡು ಹಿಡಿಯಲಾಗುತ್ತದೆ ಎಂಬ ವಿಶ್ವಾಸ ಆಯಾ ಔಷಧ ಕಂಪನಿ ಸೇರಿ ಜಗತ್ತಿನ ಎಲ್ಲ ನಾಗರಿಕರಲ್ಲೂ ಇದೆ. ಮುಂದಿರುವ ಭಾರಿ ಸವಾಲೆಂದರೆ, ಕೋಟಿಗಟ್ಟಲೇ ಪ್ರಮಾಣದಲ್ಲಿ ಔಷಧದ ಡೋಸ್ ಉತ್ಪಾದಿಸುವುದು ಹೇಗೆ? ಅದಕ್ಕಿಂತಲೂ ಮುಖ್ಯವಾಗಿ ಈ ಔಷಧವನ್ನು ಜಗತ್ತಿನ ಎಲ್ಲರಿಗೂ ಅಥವಾ ಎಲ್ಲ ರಾಷ್ಟ್ರಗಳಿಗೂ ದೊರೆಯುವಂತೆ ಮಾಡುವುದು ಹೇಗೆ? ಎಂಬುದು. ಇದಕ್ಕಾಗಿ ಭಾರಿ ಸಂಘರ್ಷಗಳೇ ನಡೆಯಲಿವೆ ಎಂಬುದಂತೂ ಖಚಿತ. ಏಕೆಂದರೆ, ಕರೊನಾಗೆ ಈಗಾಗಲೇ ಎರಡೂವರೆ ಲಕ್ಷ ಜನರು ಬಲಿಯಾಗಿದ್ದು, 33 ಲಕ್ಷಕ್ಕೂ ಅಧಿಕ ಸೋಂಕಿತರಿದ್ದಾರೆ.
ಔಷಧ ಕಂಪನಿಗಳಂತೂ ಈಗಾಗಲೇ ಕೆಲ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡೇ ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ಔಷಧವನ್ನು ಮೊದಲ ಆ ರಾಷ್ಟ್ರಕ್ಕೆ ನೀಡುವುದು ಅವುಗಳ ಆದ್ಯತೆಯಾಗಲಿದೆ. ಜತೆಗೆ, ಆ ರಾಷ್ಟ್ರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕೆಲ ದೇಶಗಳಿಗೂ ದಕ್ಕಬಹುದು. ಆದರೆ, ಕರೊನಾ ವ್ಯಾಪಿಸಿರುವ 180ಕ್ಕೂ ಅಧಿಕ ದೇಶಗಳ ಗತಿಯೇನು? ಇನ್ನು ಬಡರಾಷ್ಟ್ರಗಳು ಔಷಧ ಕಂಪನಿಗಳು ನಿಗದಿಪಡಿಸುವ ಭಾರಿ ಬೆಲೆಯನ್ನು ತೆತ್ತು ಈ ಲಸಿಕೆ ಖರೀದಿಸುವ ಶಕ್ತಿಯನ್ನಂತೂ ಹೊಂದಿಲ್ಲ.
ಎರಡು ದಶಕಗಳ ಹಿಂದೆ ಏಡ್ಸ್ಗೆ ಲಸಿಕೆ ಕಂಡು ಹಿಡಿದಾಗಲೂ ರೋಗಿಗಳು ಅಧಿಕವಾಗಿದ್ದ ಆಫ್ರಿಕಾ ಖಂಡದ ದೇಶಗಳಿಗೆ ಅದು ಲಭ್ಯವಾಗಿರಲಿಲ್ಲ. ಶ್ರಿಮಂತ ರಾಷ್ಟ್ರಗಳು ಇದರ ಮೇಲೆ ಅಧಿಪತ್ಯ ಸಾಧಿಸಿದ್ದವು. ಅಂಥದ್ದೇ ಪರಿಸ್ಥಿತಿ ಈಗ ಮರುಕಳಿಸಬಹುದು. ಏಕೆಂದರೆ, ಶ್ರೀಮಂತ ರಾಷ್ಟ್ರಗಳೇ ಇದರಿಂದ ಇನ್ನಿಲ್ಲದಂತೆ ಸಂಕಷ್ಟಕ್ಕೀಡಾಗಿವೆ.
ಜರ್ಮನಿ ಹಾಗೂ ಫ್ರಾನ್ಸ್ ದೇಶಗಳು ಔಷಧದ “ನ್ಯಾಯಯುತ ಹಂಚಿಕೆ”ಗಾಗಿ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇನ್ನೊಂದು, ಪ್ರಯತ್ನವೆಂದರೆ, ವಿಶ್ವಬ್ಯಾಂಕ್ ನೆರವು ಪಡೆಯುವುದು. ಲಸಿಕೆಗೆ ಈಗಲೇ ದರ ನಿಗದಿಪಡಿಸಿ ಮುಂಗಡ ಬೇಡಿಕೆ ಮಂಡಿಸುವುದು. ಅದಕ್ಕೆ ಬೇಕಾಗುವ ಮೊತ್ತವನ್ನು ವಿಶ್ವಬ್ಯಾಂಕ್ ಸೇರಿ ವಿವಿಧ ಸಂಸ್ಥೆಗಳ ಮೂಲಕ ಸಂಪನ್ಮೂಲ ಕ್ರೋಡೀಕರಿಸುವುದು.
ಈ ಹಿಂದೆಯೂ ಜಗತ್ತಿನ ಪ್ರಮುಖ ಔಷಧ ತಯಾರಿಕಾ ಕಂಪನಿಗಳೊಂದಿಗೆ ಇಂಥದ್ದೇ ಒಪ್ಪಂದ ಮಾಡಿಕೊಂಡು ಲಸಿಕೆಗಳನ್ನು ಅಗತ್ಯವಿರುವವರಿಗೆ ನೀಡುವ, ಬಡರಾಷ್ಟ್ರಗಳಿಗೆ ಪೂರೈಸುವ ಯತ್ನ ನಡೆದಿತ್ತು. ಈಗಲೂ ಅಂಥದ್ದೇ ಯತ್ನಗಳು ನಡೆದಿದ್ದು, ಅವುಗಳಿಗೆ ಯಶಸ್ಸು ಸಿಗಬೇಕಿದೆ. ಇಲ್ಲದಿದ್ದರೆ, ಇಡೀ ಜಗತ್ತು ಕರೊನಾ ಸಂಕಷ್ಟದಿಂದ ಅಂದುಕೊಂಡಷ್ಟು ಬೇಗ ಪಾರಾಗಲು ಸಾಧ್ಯವಿಲ್ಲ.
ನಿಷ್ಪ್ರಯೋಜಕವೆಂದು ಗುಜರಿ ಸೇರಿದ್ದ ಔಷಧ ಕರೊನಾಗೆ ರಾಮಬಾಣ? ಬಳಸಿ ಎಂದು ಭಾರತೀಯ ತಜ್ಞರು ಹೇಳುತ್ತಿರೋದೇಕೆ?